ಬೆಂಗಳೂರು: ಮುಂಗಾರು ಹಂಗಾಮಿನಲ್ಲಿ ಗೊತ್ತುಪಡಿಸಲಾಗಿದ್ದ ಗುರಿಗಿಂತ ಆಹಾರ ಧಾನ್ಯ ಉತ್ಪಾದನೆ ಕುಂಠಿತವಾಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.
ಮುಂಗಾರು ಹಂಗಾಮಿನಲ್ಲಿ 111 ಲಕ್ಷ ಟನ್ ಹಾರಧಾನ್ಯಗಳ ಉತ್ಪಾದನೆ ಗುರಿ ನಿಗದಿಪಡಿಸಿದ್ದು, 92 ಲಕ್ಷ ಟನ್ ಉತ್ಪಾದನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಶೇಂಗಾ ಹೊರತುಪಡಿಸಿ ಬಹಳಷ್ಟು ಬೆಳೆಗಳ ಉತ್ಪಾದನೆಯಲ್ಲಿ ದೊಡ್ಡಮಟ್ಟದ ಕೊರತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆಯಿಂದ ಹಲವಾರು ಕಾರ್ಯಕ್ರಮಗಳಿಗೆ ನಿಗದಿತ ಪ್ರಮಾಣದ ಅನುದಾನ ಬಿಡುಗಡೆಯಾಗಿದೆ. ಕೃಷಿ ಇಲಾಖೆಯ ಸಮರ್ಪಕ ಕಾರ್ಯನಿರ್ವಹಣೆ ಕಾರಣ ರಾಜ್ಯದ ರೈತರ ಬರಗಾಲದ ಸಂಕಷ್ಟ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
10 ಸಾವಿರ ಕೃಷಿ ಹೊಂಡಗಳ ನಿರ್ಮಾಣ, ಕೃಷಿ ಯಾಂತ್ರೀಕರಣಯೋಜನೆಯಡಿ 284 ಕೋಟಿ ರೂ. ಸಬ್ಸಿಡಿ ವಿತರಣೆ, ರೈತ ಕರೆ ಕೇಂದ್ರ ಸ್ಥಾಪನೆ, ರೈತ ಸಿರಿ ಯೋಜನೆ ಜಾರಿ, ಸಕಾಲಿಕವಾಗಿ ಬೀಜ ಗೊಬ್ಬರ ಪೂರೈಕೆ ಮೊದಲಾದ ಕಾರ್ಯಕ್ರಮಗಳಿಂದ ರೈತರಿಗೆ ಅನುಕೂಲವಾಗಿದೆ. ಬೆಳೆ ವಿಮೆ ಯೋಜನೆಯಡಿ 24.51 ಲಕ್ಷ ರೈತರಿಗೆ 600 ಕೋಟಿ ರೂ. ಬೆಳೆ ವಿಮೆ ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.