ಬೆಂಗಳೂರು: ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ಜಾರಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ 4 ಸಾರಿಗೆ ನಿಗಮಗಳ ಸಮಾನ ಮನಸ್ಕರ ವೇದಿಕೆ ಸೋಮವಾರದಿಂದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದೆ.
ಸಾರಿಗೆ ನೌಕರರು ಈ ಹಿಂದೆ ನಡೆಸಿದ್ದ ಮುಷ್ಕರದ ವೇಳೆ ದಾಖಲಾದ ಪ್ರಕರಣ ಹಿಂಪಡೆಯಬೇಕು. ಸರ್ಕಾರಿ ನೌಕರರ ರೀತಿ ಸಮಾನ ವೇತನ ಜಾರಿ ಮಾಡಬೇಕು ಎಂದು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಸರ್ಕಾರಕ್ಕೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಹೋರಾಟ ಕೈಗೊಳ್ಳಲಾಗಿದೆ. ಬೇಡಿಕೆ ಈಡೇರಿಸುವ ಬಗ್ಗೆ ಸ್ಪಷ್ಟ ಭರವಸೆ ಸಿಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು , ವೇದಿಕೆಯ ಮುಖಂಡರು ಹೇಳಿದ್ದಾರೆ.
2020 ರ ಡಿಸೆಂಬರ್ ಮತ್ತು 2021ರ ಏಪ್ರಿಲ್ ನಲ್ಲಿ ಮುಷ್ಕರಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ವಿರುದ್ಧ ಕೈಗೊಂಡಿದ್ದ ಎಲ್ಲಾ ಶಿಸ್ತಿನ ಕ್ರಮ ಹಿಂಪಡೆಯಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಬಿ.ಎಸ್. ಸುರೇಶ್ ಆಗ್ರಹಿಸಿದ್ದಾರೆ.