ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ನಾಲ್ವರು ಶಾಸಕರು ಸ್ಪರ್ಧಿಸಿದ್ದು, ಒಂದು ವೇಳೆ ಅವರು ಜಯಗಳಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಶಿಗ್ಗಾವಿ ಶಾಸಕ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾವೇರಿಯಿಂದ, ಚನ್ನಪಟ್ಟಣ ಶಾಸಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಸಂಡೂರು ಕಾಂಗ್ರೆಸ್ ಶಾಸಕ ಈ. ತುಕಾರಾಂ ಬಳ್ಳಾರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಕಣದಲ್ಲಿದ್ದಾರೆ.
ಈ ನಾಯಕರು ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಸಂಸದರಾಗಿ ಆಯ್ಕೆಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ಹಾಗೂ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರ ಅವಧಿ 2028 ರ ಜನವರಿ 5ರವರೆಗೆ ಇದೆ. ವಿಧಾನಸಭೆ ಸದಸ್ಯರಾಗಿರುವ ಹೆಚ್.ಡಿ. ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ತುಕಾರಾಂ ಅವರ ಅವಧಿ 2028ರ ಮೇ 20ರ ವರೆಗೂ ಇದೆ.