ಬೆಂಗಳೂರು: ಶಾಲೆಯಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಮೊಟ್ಟೆಯನ್ನೇ ನೀಡಬೇಕು. ಚಿಕ್ಕಿ ಅಥವಾ ಬಾಳೆಹಣ್ಣು ನೀಡುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶಿಸಿದೆ.
ಸರ್ಕಾರಿ ಶಾಲೆಯ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೆ ತಂದಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಚಿಕ್ಕಿ ನೀಡಬಹುದು. ಆದರೆ, ಕೆಲವು ಕಡೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೂ ಬಲವಂತವಾಗಿ ಚಿಕ್ಕಿ ಬಾಳೆಹಣ್ಣು ಕೊಡಲಾಗುತ್ತಿದೆ. ಹೀಗಾಗಿ ಮೊಟ್ಟೆ ಕೇಳಿದವರಿಗೆ ಮೊಟ್ಟೆಯನ್ನೇ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಶಾಲಾ ಹಂತದಲ್ಲಿ ಮೊಟ್ಟೆ ಬೇಯಿಸಿ ಕೊಡಬೇಕು. ಕೆಲವು ಕಡೆ ಅರೆಬೆಂದ ಮೊಟ್ಟೆ ನೀಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಮೊಟ್ಟೆ, ಬಾಳೆಹಣ್ಣು ಚಿಕ್ಕಿ ವಿತರಣೆ ಬಗ್ಗೆ ಸೂಕ್ತ ಲೆಕ್ಕ ನಿರ್ವಹಿಸಿ ಮೇಲ್ವಿಚಾರಣೆ ಮಾಡಬೇಕು ಮಕ್ಕಳ ಪೌಷ್ಟಿಕತೆ ಹೋಗಲಾಡಿಸಲು ಜಾರಿಗೆ ತಂದ ಯೋಜನೆ ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಹೇಳಲಾಗಿದೆ.