ಚುಮು ಚುಮು ಚಳಿಯಲ್ಲಿ ಒಂದು ಕಪ್ ಬಿಸಿ ಬಿಸಿ ಚಹಾ, ಕರಿದ ತಿಂಡಿ ಇದ್ರೆ ಚೆನ್ನ. ಆದ್ರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದ್ರೆ ನಿಮ್ಮ ಚರ್ಮದ ಸೌಂದರ್ಯ, ಆರೋಗ್ಯ ಎರಡೂ ಹದಗೆಡೋದು ಗ್ಯಾರಂಟಿ. ಯಾಕಂದ್ರೆ ಚಳಿಗಾಲದಲ್ಲಿ ಚರ್ಮ ಹೆಚ್ಚು ಡ್ರೈ ಆಗಿರುತ್ತದೆ. ಹಾಗಾಗಿ ಚರ್ಮವನ್ನು ಮೃದುವಾಗಿಡುವಂತಹ ವಸ್ತುಗಳನ್ನೇ ನೀವು ಸೇವಿಸಬೇಕು.
ಗೂಸ್ಬೆರ್ರಿ : ಇದೊಂದು ಪೌಷ್ಠಿಕಾಂಶ ಭರಿತ ಹಣ್ಣು. ಸೌಂದರ್ಯವರ್ಧಕಗಳಲ್ಲಿ ಇದನ್ನು ಬಳಸಲಾಗುತ್ತದೆ. ನಿಮ್ಮ ರಕ್ತವನ್ನು ಇದು ಶುದ್ಧೀಕರಿಸುವುದರಿಂದ ಚರ್ಮ ಹೊಳಪು ಪಡೆಯುತ್ತದೆ.
ಪಪ್ಪಾಯ : ಇದರಲ್ಲಿ ವಿಟಮಿನ್ ಎ ಹೇರಳವಾಗಿದೆ. ನಿಮ್ಮನ್ನು ಬೆಳ್ಳಗೆ ಮಾಡಬಲ್ಲ, ಚರ್ಮದ ಹೊಳಪನ್ನು ಹೆಚ್ಚಿಸಬಲ್ಲ ಕಿಣ್ವಗಳನ್ನು ಹೊಂದಿದೆ. ಇದು ಆ್ಯಂಟಿ ಒಕ್ಸಿಡೆಂಟ್ ಕೂಡ ಹೌದು. ಡೆಡ್ ಸ್ಕಿನ್ ಸೆಲ್ ಗಳನ್ನು ಹೊರಹಾಕುತ್ತೆ, ಆ್ಯಂಟಿ ಏಜಿಂಗ್ ಏಜೆಂಟ್ ನಂತೆ ಕಾರ್ಯನಿರ್ವಹಿಸುತ್ತದೆ.
ಅವೊಕಾಡೊ : ಈ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿವೆ, ಒಮೆಗಾ-9 ಕೊಬ್ಬಿನ ಆಮ್ಲ ಇರೋದ್ರಿಂದ ನಿಮ್ಮ ಮೈಬಣ್ಣ ಆರೋಗ್ಯಕರವಾಗಿರುತ್ತದೆ. ಇದರಲ್ಲಿರುವ ವಿಟಮಿನ್ ಇ ಚಳಿಗಾಲದಲ್ಲಿ ಚರ್ಮ ಸುಕ್ಕಾಗದಂತೆ ಕಾಪಾಡುತ್ತದೆ. ಮೃದುವಾದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಅವೊಕಾಡೊ ಎಣ್ಣೆಯನ್ನು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಬಳಸಬಹುದು.
ದಾಳಿಂಬೆ : ನಿಮ್ಮ ಚರ್ಮಕ್ಕೆ ಯೌವನವನ್ನು ತುಂಬಬಲ್ಲ ಹಣ್ಣು ದಾಳಿಂಬೆ. ಚರ್ಮದ ಮೇಲಿನ ರಂಧ್ರಗಳನ್ನು ಮಾಯಮಾಡುತ್ತದೆ. ಚರ್ಮದ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ. ಚಳಿಗಾಲದಲ್ಲಿ ಶೀತ ಹವಾಮಾನದ ಕಾರಣ ಚರ್ಮ ವಿಸ್ತರಿಸುತ್ತದೆ, ಆದ್ರೆ ದಾಳಿಂಬೆ ಚರ್ಮದ ರಂಧ್ರಗಳನ್ನು ಬಿಗಿಯಾಗಿಡುತ್ತದೆ.
ಅನಾನಸ್ : ಈ ಹಣ್ಣಿನಲ್ಲಿ ವಿಟಮಿನ್ ಸಿ ಪ್ರಮಾಣ ಹೇರಳವಾಗಿದೆ. ಚಳಿಗಾಲದಲ್ಲಿ ಮೊಡವೆಗಳು ಏಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಧೂಳಿನಲ್ಲಿ ಓಡಾಡಿದ್ರಂತೂ ಮೊಡವೆಗಳು ಬೇಗ ಮಾಯವಾಗುವುದಿಲ್ಲ. ಅನಾನಸ್ ಸೇವಿಸಿದ್ರೆ ಮೊಡವೆಗಳು ಕಡಿಮೆಯಾಗುತ್ತವೆ. ಇದರಲ್ಲಿ ಆ್ಯಂಟಿ ಒಕ್ಸಿಡೆಂಟ್ ಗುಣಗಳಿವೆ. ಮುಖದ ಮೇಲಿನ ಕಪ್ಪು ಕಲೆ, ಬ್ಲಾಕ್ ಹೆಡ್ಸ್ ನಿವಾರಿಸುತ್ತದೆ.
ಬಾಳೆಹಣ್ಣು : ಇದರಲ್ಲಿ ಪೊಟ್ಯಾಶಿಯಂ ಅಂಶವಿದ್ದು, ಚರ್ಮ ಡಿ ಹೈಡ್ರೈಟ್ ಆಗದಂತೆ ತಡೆಯುತ್ತದೆ. ವಿಟಮಿನ್ ಇ ಮತ್ತು ಸಿ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಚರ್ಮ ಡಲ್ ಆಗದಂತೆ ಕಾಪಾಡುತ್ತದೆ.
ಕಸ್ಟರ್ಡ್ ಸೇಬು : ಇದು ವಿಟಮಿನ್ ಎ ಮತ್ತು ಸಿ ಯ ಸಮ್ಮಿಶ್ರಣ. ಚರ್ಮವನ್ನು ಆರೋಗ್ಯಕರವಾಗಿ, ಮಾಯಿಶ್ಚರೈಸಿಂಗ್ ಆಗಿಟ್ಟುಕೊಳ್ಳಲು ಸಹಕಾರಿ. ಅಷ್ಟೇ ಅಲ್ಲ ನೈಸರ್ಗಿಕ ಸ್ಕ್ರಬ್ಬರ್ ನಂತೆಯೂ ಕೆಲಸ ಮಾಡುತ್ತದೆ. ನಿಯಮಿತವಾಗಿ ಕಸ್ಟರ್ಡ್ ಆ್ಯಪಲ್ ಜ್ಯೂಸ್ ಸೇವಿಸುವುದು ಉತ್ತಮ.
ಕಿವಿ : ಕಿವಿ ಹಣ್ಣು ಕೊಂಚ ದುಬಾರಿ. ಆದ್ರೆ ಇದರಲ್ಲಿ ವಿಟಮಿನ್ ಇ ಮತ್ತು ಸಿ ಹೇರಳವಾಗಿದೆ. ಚಳಿಗಾಲದಲ್ಲಿ ನಿಮ್ಮ ಚರ್ಮ ಚೆನ್ನಾಗಿರಬೇಕಂದ್ರೆ ಕಿವಿ ಹಣ್ಣನ್ನು ತಿನ್ನಿ.
ಪ್ಲಮ್ : ಇದು ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣು. ವಿಟಮಿನ್ ಇ ಮತ್ತು ಬಿ ಆಗರ. ಮೆಗ್ನಿಶಿಯಂ, ಕಬ್ಬಿಣ, ಕ್ಯಾಲ್ಷಿಯಂ ಮತ್ತು ಸತುವಿನ ಅಂಶಗಳು ಕೂಡ ಇವೆ. ದೇಹವನ್ನು ಶುದ್ಧೀಕರಿಸಿ ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುತ್ತದೆ. ದೇಹವನ್ನು ಹೈಡ್ರೇಟ್ ಆಗಿಡುತ್ತದೆ.