ಬೆಂಗಳೂರು: ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋವೊಂದು ಬಹಿರಂಗವಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರುದ್ಧ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಈ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಆಡಿಯೋದಲ್ಲಿ ತಮ್ಮ ವಿರುದ್ಧ ವ್ಯಕ್ತಿ ಆರೋಪ ಮಾಡಿದ್ದಾರೆ. ಉಮಾಪತಿ ಹೆಸರಿನ ವ್ಯಕ್ತಿ ಪಕ್ಷದ ಕಾರ್ಯಕರ್ತ ಕೂಡ ಹೌದು. ಬಹಿರಂಗವಾಗಿರುವ ಆಡಿಯೋದಲ್ಲಿ ಅವರು ವರ್ಗಾವಣೆಗೆ ಸಂಬಂಧಿಸಿದಂತೆ ಗೃಹ ಸಚಿವರಿಗೆ ಹಣ ನೀಡಿರುವುದಾಗಿ ಹೇಳಿದ್ದಾರೆ. ಆಡಿಯೋ ಕ್ಲಿಪ್ ನಾನೂ ಕೇಳಿಸಿಕೊಂಡಿದ್ದೇನೆ. ಆ ವ್ಯಕ್ತಿ ಯಾರು? ಯಾವಾಗ ಹಣ ನೀಡಿದ್ದಾರೆ? ಯಾರಿಗೆ ನೀಡಿದ್ದಾರೆ? ಎಷ್ಟು ಕೊಟ್ಟಿದ್ದಾರೆ? ಎಲ್ಲವನ್ನೂ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.
ಬೆಂಗಳೂರು ಪೊಲೀಸ್ ಕಮಿಷ್ನರ್ ಬಿ.ದಯಾನಂದ್ ಅವರಿಗೆ ಈ ಬಗ್ಗೆ ತನಿಖೆ ನಡೆಸಲು ಹೇಳಿದ್ದೇನೆ ಎಂದು ತಿಳಿಸಿದರು.