ಜಿಲ್ಲಾ ಕೇಂದ್ರವಾಗಿರುವ ವಿಜಯಪುರ ಬೆಂಗಳೂರಿನಿಂದ ಸುಮಾರು 520 ಕಿಲೋ ಮೀಟರ್ ದೂರದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ.
ಹಿಂದೆ ಆದಿಲ್ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರದಲ್ಲಿರುವ ಗೋಳಗುಮ್ಮಟ ವಿಶ್ವದ ಅದ್ಭುತಗಳಲ್ಲಿ ಒಂದೆಂದು ಖ್ಯಾತವಾಗಿದ್ದು, ವಿವಿಧ ದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.
ಜುಮ್ಮಾ ಮಸೀದಿ, ಇಬ್ರಾಹಿಂ ರೋಜಾ, ಗಗನ ಮಹಲ್, ಜೋಡಗುಮ್ಮಟ, ತಾಜ್ ಬಾವಡಿ, ಮಲಿಕ್ ಎ ಮೈದಾನ್, ಉಪಲಿ ಬುರಜು, ಬಾರಾಕಮಾನ್, ಮೊದಲಾದ ಸ್ಮಾರಕಗಳು ಪ್ರವಾಸಿಗರನ್ನು ಸೆಳೆಯುತ್ತವೆ.
ಗೋಳ ಗುಮ್ಮಟದ ಒಳಗಿರುವ ವೃತ್ತಾಕಾರದ ಗ್ಯಾಲರಿಯಲ್ಲಿ ಚಪ್ಪಾಳೆ ತಟ್ಟಿದರೆ ಅಥವಾ ಶಬ್ಧ ಮಾಡಿದರೆ, ಅದು ಏಳೆಂಟು ಸಲ ಪ್ರತಿಧ್ವನಿಸುತ್ತದೆ.
ಅಲ್ಲದೇ ಮೆಲುದನಿಯಲ್ಲಿ ಒಂದು ಭಾಗದಲ್ಲಿ ಪಿಸುಗುಟ್ಟಿದರೆ, ಅದು ಗುಮ್ಮಟದ ಎದುರಿನ ಇಲ್ಲವೇ ಇನ್ನೊಂದು ಬದಿಗೆ ಸ್ಪಷ್ಟವಾಗಿ ಕೇಳಿಸುತ್ತದೆ.
ಜುಮ್ಮಾ ಮಸೀದಿ ಸುಂದರ ಮತ್ತು ಪ್ರಮುಖ ಮಸೀದಿಗಳಲ್ಲಿ ಒಂದಾಗಿದೆ. 2250 ಮಂದಿ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಬಹುದಾಗಿದೆ. ಪಶ್ಚಿಮ ಭಾಗದ ಗೋಡೆಯಲ್ಲಿ ಪವಿತ್ರ ಕುರಾನ್ ವಾಕ್ಯಗಳನ್ನು ಕಲಾತ್ಮಕವಾಗಿ ಕೊರೆಯಲಾಗಿದೆ.
ಇಬ್ರಾಹಿಂ ರೋಜಾ ಸುಂದರ ವಾಸ್ತುಕಲಾ ಸಂಕೀರ್ಣವಾಗಿದೆ. ಕೋನಾಕಾರದ ಮಿನಾರ್ ಗಳು ಆಕರ್ಷಕವಾಗಿವೆ. ಗೋರಿಯ ಮುಂಭಾಗದಲ್ಲಿ ಕಲ್ಲಿನ ಸರಪಳಿ ಇದ್ದು, ಇದನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ದಖನಿ ಶೈಲಿಯ ಕುಶಲ, ಸೂಕ್ಷ್ಮವಾದ ವಾಸ್ತು ಶಿಲ್ಪ ಇದಾಗಿದೆ.
ಇನ್ನೂ ಹಲವಾರು ನೋಡಬಹುದಾದ ಪ್ರಮುಖ ಸ್ಥಳಗಳು ಇಲ್ಲಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.