ಕನಿಷ್ಟ 6 ತಿಂಗಳಿಗೊಮ್ಮೆಯಾದರೂ ಕೂದಲನ್ನು ಟ್ರಿಮ್ ಮಾಡಿಸಲೇಬೇಕು. ಆಗ ಮಾತ್ರ ಸ್ಪ್ಲಿಟ್ ಹೇರ್ ಸಮಸ್ಯೆ ಇಲ್ಲದೆ ಕೂದಲು ಉದ್ದವಾಗಿ ಬೆಳೆಯುತ್ತದೆ. ಮಹಿಳೆಯರು ಬ್ಯೂಟಿ ಪಾರ್ಲರ್‌ಗಳಲ್ಲಿ ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದು ದುಬಾರಿ ಆಗಿರೋದ್ರಿಂದ ಅನೇಕರು ಮನೆಯಲ್ಲೇ ಕೂದಲು ಕತ್ತರಿಸಿಕೊಳ್ಳಲು ಬಯಸುತ್ತಾರೆ.
ಆದರೆ ಈ ಕೆಲಸವನ್ನು ಮೊದಲ ಬಾರಿಗೆ ಮಾಡುತ್ತಿದ್ದರೆ ಸ್ವಲ್ಪ ಜಾಗರೂಕರಾಗಿರಬೇಕು. ನಿಮ್ಮ ಒಂದು ಸಣ್ಣ ನಿರ್ಲಕ್ಷ್ಯದಿಂದ ಲುಕ್ ಬದಲಾಗಬಹುದು. ಕೂದಲಿನ ನೋಡ ಕೂಡ ಕೆಟ್ಟು ಹೋಗಬಹುದು. ಹಾಗಾಗಿ ಮನೆಯಲ್ಲಿ ಕೂದಲು ಕತ್ತರಿಸುವಾಗ ವಿಶೇಷ ಕಾಳಜಿ ವಹಿಸಬೇಕು.
ಮನೆಯಲ್ಲಿ ಕೂದಲನ್ನು ಕತ್ತರಿಸುವ ಮೊದಲು ಸೌಮ್ಯವಾದ ಶಾಂಪೂ ಮತ್ತು ಕಂಡಿಷನರ್‌ನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ನಂತರ ಕೂದಲನ್ನು ಸಂಪೂರ್ಣವಾಗಿ ಒಣಗಿಸಿ, ಡ್ರೈಯರ್ ಬಳಸುವ ಬದಲು ನೈಸರ್ಗಿಕವಾಗಿ ಒಣಗಿಸಿದರೆ ಉತ್ತಮ.
ಮನೆಯಲ್ಲಿ ಕೂದಲು ಕತ್ತರಿಸಲು ಸರಿಯಾದ ಸಾಧನಗಳನ್ನು ಬಳಸಿ. ಬಟ್ಟೆ ಅಥವಾ ಎಳೆಗಳನ್ನು ಕತ್ತರಿಸಲು ಬಳಸಿದ ಕತ್ತರಿಯ ದುರ್ಬಲ ಅಂಚುಗಳು ಕೂದಲನ್ನು ಸರಿಯಾಗಿ ಕತ್ತರಿಸಲು ವಿಫಲವಾಗುತ್ತವೆ. ಇದಕ್ಕಾಗಿ ಹೊಸ ಚೂಪಾದ ಕತ್ತರಿ ಮತ್ತು ಕ್ಲೀನ್ ಬಾಚಣಿಗೆ ಬಳಸಬೇಕು.
ಯಾವಾಗಲೂ ನಮ್ಮ ಅಂದಾಜಿಗಿಂತ ಕಡಿಮೆ ಕೂದಲನ್ನು ಕತ್ತರಿಸಬೇಕು. ಕತ್ತರಿಸಿದ್ದು ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಅದನ್ನು ಸರಿಪಡಿಸಲು ಅವಕಾಶವಿರುತ್ತದೆ. ಮೊದಲೇ ಶಾರ್ಟ್ ಮಾಡಿಕೊಂಡರೆ ನಂತರ ಅದನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ.
ಅನೇಕ ಬಾರಿ ಮಹಿಳೆಯರು ಒದ್ದೆ ಕೂದಲನ್ನು ಕತ್ತರಿಸುತ್ತಾರೆ. ಆ ರೀತಿ ಮಾಡಬಾರದು. ಕೂದಲು ಒದ್ದೆಯಿದ್ದಾಗ ಸರಿಯಾದ ಶೇಪ್‌ನಲ್ಲಿ ಕತ್ತರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಒಣ ಕೂದಲನ್ನು ಮಾತ್ರ ಕತ್ತರಿಸಬೇಕು.