ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. 9 ದಿನಗಳ ಕಾಲ ನವರಾತ್ರಿ ಆಚರಣೆ ಮಾಡದ ಕೆಲ ಭಕ್ತರು ಕೊನೆಯ ಮೂರು ದಿನಗಳ ಕಾಲ ದೇವಿ ದುರ್ಗೆ ಆರಾಧನೆ ಮಾಡ್ತಾರೆ.
ಇಂದು ದುರ್ಗೆ ಪ್ರತಿಷ್ಠಾಪನೆ ಮಾಡಿ, ವಿಜಯದಶಮಿಯವರೆಗೆ ಪೂಜೆ ಮಾಡ್ತಾರೆ. ಮೂರು ದಿನಗಳ ವೃತದಲ್ಲಿರುವವರು ಸಾಬೂದಾನ ಖಿಚಡಿಯನ್ನು ಸೇವಿಸಬಹುದು. ಇದನ್ನು ಮಾಡುವುದು ಸುಲಭ.
ಮೊದಲು ಸಾಬೂದಾನವನ್ನು ನೀರಿನಲ್ಲಿ ಒಂದು ಗಂಟೆಗಳ ಕಾಲ ನೆನೆಸಿಡಬೇಕು. ನಂತ್ರ ಅದ್ರಲ್ಲಿರುವ ನೀರನ್ನು ಬಸಿಯಿರಿ. ಶೇಂಗಾವನ್ನು ಪ್ಯಾನ್ ಗೆ ಹಾಕಿ ಹುರಿದುಕೊಳ್ಳಿ. ಹುರಿದ ನಂತ್ರ ಅದ್ರ ಸಿಪ್ಪೆ ತೆಗೆಯಿರಿ. ನಂತ್ರ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಒಂದು ಚಮಚ ಉಪ್ಪು ಹಾಗೂ ಒಂದು ಚಮಚ ಸಕ್ಕರೆ ಎಲ್ಲವನ್ನೂ, ನೆನೆಸಿ, ಬಸಿದಿಟ್ಟ ಸಾಬೂದಾನಕ್ಕೆ ಹಾಕಿ. ಪುಡಿ ಮಾಡಿದ ಶೇಂಗಾ ಹುಡಿಯನ್ನೂ ಹಾಕಿ ಮಿಕ್ಸ್ ಮಾಡಿ.
ನಂತ್ರ ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ, ಅದನ್ನು ಬಿಸಿ ಮಾಡಿ, 2 ಚಮಚ ಶೇಂಗಾ ಹಾಕಿ ಫ್ರೈ ಮಾಡಿ ತೆಗೆದಿಡಿ. ಅದೇ ಪಾತ್ರೆಗೆ ಜಿರಿಗೆ ಹಾಕಿ, ಶುಂಠಿ ಪೇಸ್ಟ್ ಹಾಕಿ. ಹಸಿ ಮೆಣಸಿನ ಕಾಯಿ ಹಾಗೂ ಕರಿಬೇವಿನ ಎಲೆಯನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತ್ರ ಕತ್ತರಿಸಿದ ಆಲೂಗಡ್ಡೆಯನ್ನು ಹಾಕಿ ಮಿಕ್ಸ್ ಮಾಡಿ. ಆಲೂಗಡ್ಡೆ ಬೆಂದ ನಂತ್ರ ಅದಕ್ಕೆ ಸಾಬೂದಾನ ಮಿಕ್ಸ್ ಹಾಕಿ ಚೆನ್ನಾಗಿ ಕೈ ಆಡಿಸಿ. ಬೇಕಾದಲ್ಲಿ ನಿಂಬೆ ರಸವನ್ನು ಬೆರೆಸಿ. ಸ್ವಲ್ಪ ಸಮಯ ಮುಚ್ಚಿ ಎಲ್ಲವನ್ನೂ ಬೇಯಿಸಿ. ನಂತ್ರ ಹುರಿದಿಟ್ಟ ಶೇಂಗಾ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ, ಸರ್ವ್ ಮಾಡಿ.