ಕಚೇರಿ ಒತ್ತಡ, ಮನೆ ಕೆಲಸ ಹೀಗೆ ಅನೇಕ ಸಮಸ್ಯೆಗಳ ಮಧ್ಯೆಯೇ ದಿನ ಶುರುವಾಗುತ್ತದೆ. ಆದ್ರೆ ದಿನ ಆರಂಭದಲ್ಲಿಯೇ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸಮಸ್ಯೆ ತಕ್ಷಣ ಕಾಣಿಸಿಕೊಳ್ಳದೆ ಹೋದ್ರೂ ನಮ್ಮ ತಪ್ಪುಗಳು ದೀರ್ಘ ಕಾಲದ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಪ್ರತಿ ದಿನ ಒಂದೇ ಸಮಯಕ್ಕೆ ನಾವು ಏಳುವುದಿಲ್ಲ. 10 ನಿಮಿಷ ಹೆಚ್ಚಿನ ನಿದ್ರೆ ಮಾಡಿದ್ರೆ ಮೂಡ್ ಚೆನ್ನಾಗಿರುತ್ತೆ ಎಂದು ಭಾವಿಸುತ್ತೇವೆ. ಆದ್ರೆ ಇದು ತಪ್ಪು. ಪ್ರತಿ ದಿನ ಸರಿಯಾದ ಸಮಯಕ್ಕೆ ಮಲಗಿ, ಸರಿಯಾದ ಸಮಯಕ್ಕೆ ಏಳಬೇಕು.
ಬೆಳಗ್ಗೆ ಎದ್ದ ತಕ್ಷಣ ನೀವು ಕತ್ತಲೆ ರೂಮಿನಲ್ಲಿ ಇರಬೇಡಿ. ಸರಿಯಾದ ಗಾಳಿ, ಬೆಳಕು ಬರುವ ಜಾಗದಲ್ಲಿ ಇರಿ. ಇದು ಮೂಡ್ ಸರಿ ಮಾಡುವುದು ಮಾತ್ರವಲ್ಲ ಸೋಂಕು, ಉರಿಯೂತದಿಂದ ಹೋರಾಡುವ ಶಕ್ತಿ ನೀಡುತ್ತದೆ. ಬೆಳಗಿನ ಸೂರ್ಯನ ಬೆಳಕು ವಿಟಮಿನ್ ಡಿ ನೀಡುತ್ತದೆ.
ಬೆಳಿಗ್ಗೆ ಹಾಸಿಗೆಯಿಂದ ತಕ್ಷಣ ಏಳಬಾರದು. ಹಾಗೆ ಮಾಡಿದ್ರೆ ರಕ್ತದ ಹರಿವು ಕಾಲಿಗೆ ಹೋಗುತ್ತದೆ. ಹಾಗಾಗಿ ಹಾಸಿಗೆ ಮೇಲೆ ಸ್ವಲ್ಪ ಸಮಯ ಕುಳಿತು ನಂತ್ರ ಏಳುವುದು ಒಳ್ಳೆಯದು.
ನಿಯಮಿತವಾಗಿ ವ್ಯಾಯಾಮ ಮಾಡುವುದು ಉತ್ತಮ. ಇದ್ರಿಂದ ಸಾಕಷ್ಟು ಲಾಭವಿದೆ. ಮನಸ್ಸು, ದೇಹ ಉತ್ಸಾಹದಿಂದ ಕೂಡಿರುವ ಜೊತೆಗೆ ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸವಿರುವವರು ಅದನ್ನು ನಿಧಾನವಾಗಿ ಬಿಡಬೇಕು. ಏಕಾಏಕಿ ಕಾಫಿ ಸೇವನೆ ಬಿಟ್ಟರೆ ಏಕಾಗ್ರತೆ ಭಂಗ, ತಲೆನೋವು ಕಾಡಬಹುದು.
ಟೀ ಅಥವಾ ಕಾಫಿಯಲ್ಲಿ ಆಮ್ಲವಿರುತ್ತದೆ. ಹಾಗಾಗಿ ಕಾಫಿ, ಟೀ ಸೇವನೆ ಮಾಡಿದ ತಕ್ಷಣ ಬ್ರಷ್ ಮಾಡಬಾರದು. ಹಲ್ಲಿನ ಮೇಲೆ ಇದು ಪರಿಣಾಮ ಬೀರುತ್ತದೆ. ಟೀ, ಕಾಫಿ ಸೇವನೆಯಾದ 30 ನಿಮಿಷದ ನಂತ್ರ ಬ್ರಷ್ ಮಾಡಿ.
ಬೆಳಿಗ್ಗೆ ಎದ್ದ ತಕ್ಷಣ ಮೊಬೈಲ್, ಮೇಲ್ ನೋಡಬೇಡಿ. ಇದು ಕೆಲಸದ ಒತ್ತಡವನ್ನು ಹೇರುತ್ತದೆ. ಇದ್ರಿಂದ ದಿನ ಹಾಳಾಗುತ್ತದೆ.