ಬೆಂಗಳೂರು: ಸರ್ಕಾರಿ ನೌಕರರಿಗೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹೊಸ ಪಿಂಚಣಿ ನೀತಿ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರಲು ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗದಿಂದ ಮನವಿ ಸ್ವೀಕರಿಸಿದ ಅವರು ಮಾತನಾಡಿದರು.
ಎನ್‌ಪಿಎಸ್ ರದ್ಧತಿ ಕುರಿತಂತೆ ಪರಿಶೀಲನೆ ನಡೆಸಲು ಹಿಂದಿನ ಸರ್ಕಾರ ಸಮಿತಿ ರಚಿಸಿದ್ದು, ಶೀಘ್ರವೇ ಸಮಿತಿಯ ವರದಿ ಅವಲೋಕಿಸಬೇಕು, ಇಲ್ಲವೇ ಸರ್ಕಾರ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನೌಕರರು ಮನವಿ ಮಾಡಿದ್ದಾರೆ,
2006ರ ನಂತರ ನೇಮಕವಾಗಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬಗಳಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕು. 7 ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಪಡೆದು ವೇತನ, ಭತ್ಯೆ ಪರಿಷ್ಕರಿಸಬೇಕು ಎಂದು ಮನವಿ ಮಾಡಲಾಗಿದ್ದು, ಇದಕ್ಕೆ ಸ್ಪಂದಿಸಿದ ಡಿ.ಕೆ. ಶಿವಕುಮಾರ್ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಯಂತೆ ಎನ್.ಪಿ.ಎಸ್. ರದ್ದುಪಡಿಸಿ ಒಪಿಎಸ್ ಪುನಃ ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.