ವ್ಹೀಲ್ ಚೇರ್ ಬಳಸುವ ಅಂಗವಿಕಲ ಮಹಿಳೆಗೆ ವಿವಾಹ ನೋಂದಣಿ ಕಚೇರಿಯಲ್ಲಿ ಲಿಫ್ಟ್ ಸೇವೆ ಇಲ್ಲದೇ ಅಡಚಣೆ ಉಂಟಾಗಿದೆ. ವಿವಾಹ ನೋಂದಣಿಗೆ ಆಗಮಿಸಿದ ಅಂಗವಿಕಲೆಗೆ ಮೆಟ್ಟಿಲು ಹತ್ತಿ ಮೇಲಿನ ಮಹಡಿಯಲ್ಲಿರುವ ಕಚೇರಿಗೆ ಆಗಮಿಸಲು ಸಾಧ್ಯವಿಲ್ಲ ಎಂಬುದು ತಿಳಿದಿದ್ದರೂ ಸಹ ಅಧಿಕಾರಿಗಳು ಕೆಳಗೆ ಇಳಿದು ಬರಲು ನಿರಾಕರಿಸಿದ್ದರು ಎನ್ನಲಾಗಿದೆ. ಎರಡನೇ ಮಹಡಿಯವರೆಗೆ ಅಂಗವಿಕಲೆಯನ್ನು ಹೊತ್ತಿಕೊಂಡು ಹೋಗಬೇಕಾಗಿ ಬಂತು ಅಂದು ಮಹಿಳೆ ಆರೋಪಿಸಿದ್ದಾರೆ.
ನಾನು ವ್ಹೀಲ್ ಚೇರ್ ಬಳಕೆ ಮಾಡುತ್ತಿದ್ದೇನೆ ಎಂಬ ಒಂದೇ ಕಾರಣಕ್ಕೆ ನನಗೆ ಮದುವೆಯಾಗುವ ಹಕ್ಕೇ ಇಲ್ವಾ..? ಮೆಟ್ಟಿಲು ಹತ್ತುವಾಗ ನಾನು ಆಯತಪ್ಪಿ ಬೀಳುತ್ತಿದ್ದರೆ ಯಾರು ಹೊಣೆಯಾಗುತ್ತಿದ್ದರು ಅದಕ್ಕೆ..? ಎಂದು ಅಂಗವಿಕಲ ಹಕ್ಕುಗಳ ಕಾರ್ಯಕರ್ತೆ ಕೂಡ ಆಗಿರುವ ವಿರಾಲಿ ಮೋದಿ ಪ್ರಶ್ನೆ ಮಾಡಿದ್ದಾರೆ.
ಈ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು ಅನೇಕರು ಇದನ್ನು ರಿಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಕೂಡ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದು ಆದಷ್ಟು ಬೇಗ ಇಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ನಾನು ಒಬ್ಬ ಅಂಗವಿಕಲ ಮಹಿಳೆ. ನಾನು ಅಕ್ಟೋಬರ್ 16ರಂದು ಖಾರ್ ಮುಂಬೈನಲ್ಲಿರೋ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದೇನೆ. ಕಚೇರಿಯಲ್ಲಿ ಲಿಫ್ಟ್ ಇರಲಿಲ್ಲ. ಆಫೀಸು 2ನೇ ಮಹಡಿಯಲ್ಲಿತ್ತು. ಸಹಿ ಪಡೆದುಕೊಳ್ಳಲು ಕೆಳಗೆ ಇಳಿದು ಬರಲು ಅಧಿಕಾರಿಗಳು ತಯಾರಿರಲಿಲ್ಲ. ಹೀಗಾಗಿ ನನ್ನನ್ನೇ ಮೇಲೆ ಹೊತ್ತಿಕೊಂಡು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮದುವೆಯಾಗೋಕೆ ನಾನು ಇಷ್ಟೆಲ್ಲ ಸಾಹಸ ಮಾಡಬೇಕಾಯ್ತು ಎಂದು ಬರೆದುಕೊಂಡಿದ್ದಾರೆ.