ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಕ್ರಮ ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯಪಾಲರ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿಯೇ ಅತಿ ದೊಡ್ಡ ಭ್ರಷ್ಟಾಚಾರಿ ಎಂದರೆ ಬಿ.ಎಸ್.ಯಡಿಯೂರಪ್ಪ, ಯಡಿಯೂರಪ್ಪ ಭ್ರಷ್ಟಾಚಾರದ ಕಿರೀಟ ತೊಟ್ಟುಕೊಂಡಿದ್ದಾರೆ. ಭ್ರಷ್ಟಾಚಾರದಲ್ಲಿ ಬಿಎಸ್ ವೈ ಪುತ್ರ ವಿಜಯೇಂದ್ರ ಪಿಹೆಚ್ ಡಿ ಮಾಡಿದ್ದಾರೆ. ಬ್ಲ್ಯಾಕ್ ಮೇಲ್ ನೈಪುಣ್ಯತೆ ಇರುವ ಏಕೈಕ ವ್ಯಕ್ತಿ ಎಂದರೆ ಕುಮಾರಸ್ವಾಮಿ. ಈಗ ಕಳ್ಳರ ಕೂಟ ಸೇರಿಕೊಂಡು ಕುಮಾರಸ್ವಾಮಿ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ ಬೇರೆಯಲ್ಲ, ವಿಜಯೇಂದ್ರ ಬೇರೆಯಲ್ಲ. ಅವರು ಭ್ರಷ್ಟಾಚಾರದಲ್ಲಿಯೇ ಹುಟ್ಟಿ, ಭ್ರಷ್ಟಾಚಾರದಲ್ಲಿಯೇ ಬೆಳೆದವರು. ಬಿಜೆಪಿ ನಾಯಕರ ಭ್ರಷ್ಟಾಚಾರ ರಾಜ್ಯಪಾಲರಿಗೆ ಕಂಡಿಲ್ಲ. ನಿರಾಣಿ, ಶಶಿಕಲಾ ಜೊಲ್ಲೆ, ಕುಮರಸ್ವಾಮಿ ವಿರುದ್ಧ ಯಾವುದೇ ತನಿಖೆಗೆ ಅನುಮತಿ ನೀಡಿಲ್ಲ. ಈಗ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ. ಗೆಹ್ಲೋಟ್ ಘನತೆ ಇಲ್ಲದ ರಾಜ್ಯಪಾಲರು ಎಂದು ಆಕ್ರೋಶ ವ್ಯಕ್ತಪಡಿಸಿದರು.