ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಲೈಂಗಿಕ ದೌರ್ಜನ್ಯದ ದೃಶ್ಯಗಳನ್ನು ಒಳಗೊಂಡ ವಿಡಿಯೋ ತಮ್ಮ ಬಳಿ ಇದೆ ಎನ್ನುವ ಮೂಲಕ ಕಳೆದ ಕೆಲ ತಿಂಗಳಿನಿಂದ ಭಾರಿ ಸುದ್ದಿಯಲ್ಲಿದ್ದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ಈ ವಿಡಿಯೋಗಳು ಒಳಗೊಂಡ ಪೆನ್ ಡ್ರೈವ್ ಬಹಿರಂಗವಾದ ಬಳಿಕ ಮತ್ತೆ ಲೈಮ್ ಲೈಟ್ ಗೆ ಬಂದಿದ್ದಾರೆ.
ಈ ಪೆನ್ ಡ್ರೈವ್ ಗಳನ್ನು ಯಾರು ಬಹಿರಂಗಗೊಳಿಸಿದ್ದಾರೆ ಎಂಬ ಚರ್ಚೆ ನಡೆದಿದ್ದು, ಇದರ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ದೇವರಾಜೇಗೌಡ, ವಿಡಿಯೋ ಬಹಿರಂಗದ ಹಿಂದೆ ನನ್ನ ಕೈವಾಡವಿಲ್ಲ. ಇದರ ಹಿಂದೆ ದೊಡ್ಡ ನಾಯಕರಿದ್ದಾರೆ ಎಂದಿದ್ದರಲ್ಲದೆ ಎಲ್.ಆರ್. ಶಿವರಾಮೇಗೌಡ ಹಾಗೂ ಡಿ.ಕೆ. ಶಿವಕುಮಾರ್ ಜೊತೆ ತಾವು ಮಾತನಾಡಿದ್ದ ಆಡಿಯೋವನ್ನು ಬಿಡುಗಡೆ ಮಾಡಿದ್ದರು.
ಇದರ ಮಧ್ಯೆ ಮಹಿಳೆಯೊಬ್ಬರು ವಕೀಲ ದೇವರಾಜೇಗೌಡ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಏಪ್ರಿಲ್ 1 ರಂದು ಹೊಳೆನರಸೀಪುರ ಠಾಣೆಗೆ ದೂರು ನೀಡಿದ್ದು, ಈ ದೂರನ್ನು ಆಧರಿಸಿ ದೇವರಾಜೇಗೌಡ ಅವರನ್ನು ಚಿತ್ರದುರ್ಗ ಜಿಲ್ಲೆ ಹಿರಿಯೂರು ಸಮೀಪ ಬಂಧಿಸಲಾಗಿತ್ತು. ವಿಚಾರಣೆ ಬಳಿಕ ನ್ಯಾಯಾಧೀಶರ ಮುಂದೆ ದೇವರಾಜೇಗೌಡ ಅವರನ್ನು ಹಾಜರುಪಡಿಸಿದ ವೇಳೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದೇವರಾಜೇಗೌಡ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತಪಾಸಣೆ ವೇಳೆ ಹಲವಾರು ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ ದೇವರಾಜೇಗೌಡ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದ್ದು, ಇದೀಗ ಅವರ ಬಂಧನ ಹಿನ್ನೆಲೆಯಲ್ಲಿ ಅದೆಲ್ಲದಕ್ಕೂ ತೆರೆ ಬಿದ್ದಿದೆ.