ತಮಿಳು ನಟ ಧನುಷ್ ಹಾಗೂ ನಿರ್ಮಾಪಕಿ ಐಶ್ವರ್ಯಾ ರಜನಿಕಾಂತ್ ತಮ್ಮ ವೈವಾಹಿಕ ಜೀವನದಿಂದ ಹೊರಬಂದ ಬಳಿಕ ಇದೀಗ ಮತ್ತೆ ಚರ್ಚೆಯಲ್ಲಿದ್ದಾರೆ. 18 ವರ್ಷಗಳ ದಾಂಪತ್ಯ ಜೀವನಕ್ಕೆ ಈ ದಂಪತಿ ಅಂತ್ಯ ಹಾಡುವ ಮೂಲಕ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದರು.
ಆದರೆ ಇದೀಗ ಈ ದಂಪತಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಿದ್ದಾರಾ..? ಎಂಬ ಅನುಮಾನ ಮೂಡಿದೆ. ಈ ದಂಪತಿ ವಿಚ್ಛೇದನವನ್ನು ಮುಂದುವರಿಸಲು ಇಚ್ಛಿಸದೇ ತಮ್ಮ ಸಂಬಂಧವನ್ನು ಮತ್ತೆ ಮುಂಂದುವರಿಸಲು ಯತ್ನಿಸುತ್ತಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ.
ಆದರೆ, ʼಬಾಲಿವುಡ್ ಲೈಫ್ʼ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ದಂಪತಿ ಪರಸ್ಪರ ರಾಜಿ ಮಾಡಿಕೊಳ್ಳುವ ಯಾವುದೆ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.
ತಮ್ಮ ಜೀವನದಲ್ಲಿ ಇವರು ಈಗಾಗಲೇ ಮುಂದುವರಿದಿದ್ದಾರೆ. ಧನುಷ್ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದು, ಮುರಿದು ಹೋದ ಸಂಬಂಧದ ಬಗ್ಗೆ ಮತ್ತೆ ಯೋಚಿಸುತ್ತಿಲ್ಲ ಹಾಗೂ ಐಶ್ವರ್ಯಾ ಕೂಡ ತಮ್ಮ ಜೀವನದಲ್ಲಿ ಶಾಂತಿಗೆ ಮೊದಲ ಆದ್ಯತೆ ನೀಡಿದ್ದಾರೆ ಎಂದು ವರದಿಯಾಗಿದೆ.
ಐಶ್ವರ್ಯಾ ಹಾಗೂ ಧನುಷ್ ಅಧಿಕೃತವಾಗಿ ವಿಚ್ಛೇದನ ಪಡೆಯದೇ ಇದ್ದರೂ ಸಹ ಇಬ್ಬರೂ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ಹೀಗಾಗಿ ಅಧಿಕೃತ ವಿಚ್ಛೇದನದ ಬಗ್ಗೆ ಇಬ್ಬರೂ ಅಷ್ಟಾಗಿ ಯೋಚಿಸುತ್ತಿಲ್ಲ ಎನ್ನಲಾಗಿದೆ.
ಇಬ್ಬರಲ್ಲಿ ಯಾರೇ ಮರು ಮದುವೆಯಾಗುವ ನಿರ್ಧಾರಕ್ಕೆ ಬಂದರೆ ಆಗ ಅಧಿಕೃತ ಡಿವೋರ್ಸ್ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಸದ್ಯಕ್ಕೆ ಇಬ್ಬರೂ ನ್ಯಾಯಾಲಯದ ಮೆಟ್ಟಿಲು ಏರಿಲ್ಲ ಎಂದು ಮೂಲಗಳು ಹೇಳಿವೆ.