ಮಂಡ್ಯ: ನಟ ದರ್ಶನ್ ಪ್ರಕರಣದಿಂದ ಸ್ಯಾಂಡಲ್ವುಡ್ ಗೆ ಕಳಂಕ ವಿಚಾರಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ.
ಅತ್ಯುನ್ನತ ಸ್ಥಾನಕ್ಕೆ ಏರಿದವನು ಮತ್ತೆ ಕೆಳಕ್ಕೆ ಬೀಳುವುದು ಬೇಡ. ನಮ್ಮದು ಚಂದನವನ. ಒಂದು ಮರ ಒಣಗಿದರೇನಂತೆ, ಇನ್ನೊಂದು ಮಳೆಗೆ ಕಾಡು ಬೆಳೆದೇ ಬೆಳೆಯುತ್ತದೆ. ಸಿನಿಮಾ ಕಲಾವಿದರು ಸಣ್ಣದಾಗಿ ಯೋಚನೆ ಮಾಡಬೇಕು. ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು, ದ್ವೇಷವನ್ನು ಕ್ಯಾರೆಕ್ಟರ್ ಮಾಡಬೇಕು. ನಾವು ಆ ರೀತಿ ಸಿನಿಮಾದಲ್ಲಿ ತೋರಿಸಬೇಕು ಅಷ್ಟೇ. ನಿಜ ಜೀವನದಲ್ಲಿ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಆಗಬಾರದು. ಇದು ಕಲಾವಿದರ ಕರ್ತವ್ಯ. ನಟ ದರ್ಶನ್ ನನ್ನ ಮಗು ಎಂದು ತಿಳಿದುಕೊಳ್ಳಿ. ಮಗು ತಪ್ಪು ಮಾಡಿದಾಗ ತಂದೆ ಎಷ್ಟು ನೋವು ಅನುಭವಿಸುತ್ತಾನೋ ನಾನು ನೋವು ಅನುಭವಿಸಿದ್ದೇನೆ. ಮಗುವೂ ಅಷ್ಟೇ ನೋವು ತಿಂದಿರುತ್ತದೆ ಎಂದು ಹೇಳಿದ್ದಾರೆ.