ಮಡಿಕೇರಿ: ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕರು ಮಾಜಿ ಸಿಎಂ ವಿರುದ್ಧ ಕೆಂಡ ಕಾರಿದ್ದಾರೆ.
ಹೆಚ್.ಡಿ.ಕೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಆಗಿರುವ ಹೆಚ್.ಡಿ.ಕೆ ಹೇಳಿಕೆಯ ಅರ್ಥವೇನು? ಗ್ಯಾರಂಟಿ ಯೋಜನೆಯಿಂದ ಯಾವ ಹೆಣ್ಣು ಮಕ್ಕಳು, ಯಾವ ತಾಯಂದಿರು ದಾರಿ ತಪ್ಪಿದ್ದಾರೆ? ಹೆಣ್ಣುಮಕ್ಕಳು ತವರು ಮನೆಗೆ ಹೋದರೆ, ದೇವಸ್ಥಾನಗಳಿಗೆ ಹೋದರೆ ದಾರಿ ತಪ್ಪಿತಂದಾಗುತ್ತಾ? ಎಂದು ಕಿಡಿಕಾರಿದ್ದಾರೆ.
ಸಂಭ್ರಮದಿಂದ ಹಬ್ಬ ಆಚರಣೆ ಮಾಡುವುದು, ಫ್ರಿಡ್ಜ್, ಟಿವಿ ತೆಗೆದುಕೊಳ್ಳುವುದು, ಬಟ್ಟೆ ಖರೀದಿಸುವುದು ಇದೆಲ್ಲ ದಾರಿತಪ್ಪಿದಂತಾಗುತ್ತಾ? ಇಡೀ ದೇಶ ಇಂದು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊಗಳುತ್ತಿದೆ. ನಮ್ಮ ಗ್ಯಾರಂಟಿ ನೋಡಿ ಮೋದಿ ಗ್ಯಾರಂಟಿ ತಂದಿದ್ದಾರೆ. ಓರ್ವ ಮಾಜಿ ಮುಖ್ಯಮಂತ್ರಿಯಾಗಿರುವವರು ಈ ರೀತಿ ಹೇಳಿಕೆಗಳನ್ನು ನೀಡುರುವುದು ಖಂಡನೀಯ. ಹೆಚ್.ಡಿ.ಕೆ ಹೇಳಿಗೆ ಹೆಣ್ಣುಮಕ್ಕಳು ಯಾವ ರೀತಿ ಪ್ರತಿಕ್ರಿಯೆಗಳನ್ನು ಕೊಡುತ್ತಾರೆ ಗೊತಿಲ್ಲ. ಹೆಚ್.ಡಿ.ಕೆ ಹೇಳಿಕೆ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಇಡೀ ನಾಡಿಗೆ ಮಾಡಿರುವ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್.ಡಿ.ಕೆ ಹೇಳಿಕೆಗೆ ಕ್ಷಮೆ ಕೇಳುವುದೆಲ್ಲ ಅವರಿಗೆ ಲೆಕ್ಕಕ್ಕಿಲ್ಲ, ಈ ಹಿಂದೆ ನನ್ನ ತಾಯಿ ಬಗ್ಗೆಯೂ ಮಾತನಾಡಿದ್ದರು. ಬಳಿಕ ಬಂದು ಕ್ಷಮೆ ಕೇಳಿ ಹೋದರು ಅದರಿಂದ ಏನೂ ಉತ್ತರ ಸಿಗುವುದಿಲ್ಲ. ಅವರ ಹೇಳಿಕೆಯಿಂದ ಅವರ ಮನಸ್ಥಿತಿ ಎಂಥಾದ್ದು ಎಂಬುದು ಅರ್ಥವಾಗುತ್ತಿದೆ. ಇದಕ್ಕೆ ಜನರೇ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.