ಮೈಸೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜನರು ಅಧಿಕಾರಕ್ಕೆ ಬಂದಂತೆ. ನಮ್ಮ ಜನಾಂದೊಲನ ರಾಜ್ಯದ, ಸಂವಿಧಾನದ ರಕ್ಷಣೆಗಾಗಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಿಪಕ್ಷ ನಯಾಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏ ಕುಮಾರಸ್ವಾಮಿ, ಅಶೋಕಾ, ವಿಜಯೇಂದ್ರ ನಿಮಗೆ ಸಿದ್ದರಾಮಯ್ಯ ಅವರ ರಾಜೀನಾಮೆ ಬೇಕಾ? ನಮ್ಮ ಸರ್ಕಾರವನ್ನು ಹತ್ತು ತಿಂಗಳಲ್ಲಿ ತೆಗೆಯುತ್ತೇವೆ ಎಂದು ಹುನ್ನಾರ ನಡೆಸುತ್ತಿದ್ದೀರಿ. ನಮ್ಮ ಯೋಜನೆಗಳ ರಕ್ಷಣೆಗಾಗಿ ನಮ್ಮ ಹೋರಾಟ ಎಂದರು.
ನನ್ನನ್ನು ಮಾಧ್ಯಮಗಳು ಬಂಡೆ ಎಂದು ಕರೆದಿದ್ದಾರೆ. ಈ ಬಂಡೆ ಸಿಎಂ ಸಿದ್ದರಾಮಯ್ಯ ಜೊತೆಗಿದೆ. ನನ್ನ ಜೊತೆ 136 ಜನ ಶಾಸಕರಿದ್ದಾರೆ. ನಿಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರವನ್ನು ಅಲುಗಾಡಿಸಲೂ ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕರ ವಿರುದ್ಧ ಗುಡುಗಿದರು.
ಕುಮಾರಸ್ವಾಮಿ ನಿನ್ನ ಅಧ್ಯಕ್ಷತೆಯಲ್ಲಿ ಜೆಡಿಎಸ್ 19 ಸೀಟ್ ಗೆದ್ದಿದೆ. ಈ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 136 ಸೀಟು ಗೆದ್ದಿದೆ. ಬ್ರಿಟಿಷರಿಂದಲೇ ಕಾಂಗ್ರೆಸ್ ತೆಗೆಯಲು ಆಗಿಲ್ಲ. ನೀನು ಎರಡು ಜನ್ಮ ಎತ್ತಿದರೂ ನಮ್ಮನ್ನು ತೆಗೆಯಲು ಆಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾನ್ಯ ಜನರು ಅಕ್ಕ-ತಂಗಿಯರಿಗೆ ಅರಿಷಿಣ-ಕುಂಕುಮಕ್ಕೆ ಜಮೀನು ಕೊಡುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಅವರ ಧರ್ಮ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಜಮೀನು ಕೊಟ್ಟಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯನವರಿಗೆ ಗೊತ್ತಿರಲಿಲ್ಲ. ಡಿನೋಟಿಫಿಕೇಶನ್ ಆದ ಜಮೀನನ್ನು ಕೊಡಿ ಎಂದು ಪಾರ್ವತಿ ಕೇಳಿದ್ದಾರೆ. ಬಳಿಕ ಆ ಜಮೀನಿನ ಬದಲಿಗೆ 14 ಸೈಟ್ ಗಳನ್ನು ಮುಡಾದವರು ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ? ಸಿದ್ದರಾಮಯ್ಯನವರು ತನ್ನ ಹೆಂಡತಿಗೆ ಜಮೀನು ಕೊಡಿ ಎಂದು ಪತ್ರ ಬರೆದಿದ್ದಾರಾ? ಇಲ್ಲ. ಬಸವರಾಜ್ ಬೊಮ್ಮಾಯಿ ಅವರ ಅವಧಿಯಲ್ಲಿಯೇ ಮುಡಾ ಸೈಟ್ ಕೊಡಲಾಗಿದೆ. ನಿಮ್ಮ ತಟ್ಟೆಯಲ್ಲೇರ‍್ ಹೆಗ್ಗಣಗಳು ಬಿದ್ದಿವೆ ಎಂದು ಕಿಡಿಕಾರಿದರು.