ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ನಾನು ವೈಯಕ್ತಿಕವಾಗಿ ಗೌರವ ನೀಡುತ್ತೇನೆ. ಅವರು ನನಗೆ ಗೌರವ ಕೊಟ್ಟರೆ, ನಾನು ಅದೇ ಗೌರವ ಕೊಡುತ್ತೇನೆ. ಆದರೆ ಅವರು ಪದೇ ಪದೇ ನನ್ನನ್ನು ವೈಯಕ್ತಿಕವಾಗಿ ಆರೋಪ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕುಮಾರಸ್ವಾಮಿ ಪದೇ ಪದೆ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ, ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದು ಆಧಾರರಹಿತ ಟೀಕೆ ಮಾಡುತ್ತಿದ್ದಾರೆ. ನಾನು ಒಂದು ಕಾಲದಲ್ಲಿ ಬಂಡೆ ಒಡೆದಿದ್ದರೆ, ನನ್ನ ಜಮೀನಿನ ಬಂಡೆಯನ್ನು ಕಾನೂನುಬದ್ಧವಾಗಿ ಒಡೆದಿದ್ದೇನೆ. ನಾವು ಹಿರಿಯರಿಗೆ ಗೌರವ ನೀಡುವುದೇ ಅವರಿಂದಲೂ ಅದನ್ನು ಸ್ವೀಕರಿಸಲು ಎಂದರು.
ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಚುನಾವಣೆ ನಂತರ ಅವರ ಪಕ್ಷ ಯಾವ ಸ್ಥಿತಿಗೆ ತಲುಪಲಿದೆ ಕಾದು ನೋಡಿ. ನಮ್ಮಂತಹವರನ್ನು, ಅಂದರೆ ಸಮುದಾಯವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಟ್ಟು ಅವರು ಏನೇ ಅಂದರೂ ಸಹಿಸಿಕೊಂಡಿದ್ದೇನೆ. ಅವರು ಸವಾಲು ಸ್ವೀಕರಿಸಿದ್ದರೆ ಚುನಾವಣೆ ನಂತರ ಅಧಿವೇಶನದಲ್ಲಿ ಮಾತನಾಡೋಣ ಎಂದು ತಿಳಿಸಿದರು.
ಎನ್ ಒಸಿ ನೀಡಲು ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಬೆದರಿಕೆ ಹಾಕುತ್ತಿದ್ದೇವೆ ಎಂದು ಹೆಚ್.ಡಿ.ಕೆ ಆರೋಪಿಸಿದ್ದಾರೆ. ನಾವು ನೀರಿನ ಕಷ್ಟಕಾಲದಲ್ಲೂ ಬೆಂಗಳೂರಿನ ಎಲ್ಲಾ ಜನರಿಗೂ ಕುಡಿಯಲು ನೀರು ಪೂರೈಸುತ್ತಿದ್ದೇವೆ. ಕುಮಾರಸ್ವಾಮಿ ಅವರು ತಮ್ಮ ನುಡಿಮುತ್ತುಗಳನ್ನು ಮರೆ ಮಾಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಮಾಧ್ಯಮಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಆ ರೀತಿ ಮಾತನಾಡಿ ಎಂದು ಹೇಳಿದವರು ಯಾರು? ಕುಮಾರಸ್ವಾಮಿ ಮಾತುಗಳಿಂದ ಮಹಿಳೆಯರಿಗೆ ಆಗಿರುವ ಅಪಮಾನವನ್ನು ಅವರ ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ. ಇದು ಮಹಿಳೆಯರು ಹಾಗೂ ಅವರ ಸ್ವಾಭಿಮಾನದ ವಿಚಾರ. ತಮ್ಮ ಹೇಳಿಕೆ ಮುಚ್ಚಿ ಹಾಕಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.