ಮಡಿಕೇರಿ: ಎರಡು ದಿನಗಳಿಂದ ರಾಜ್ಯದಲ್ಲಿ ಸಾಲು ಸಾಲು ಬೆಂಕಿ ದುರಂತಗಳು ಸಂಭವಿಸುತ್ತಿವೆ. ಬೆಂಗಳೂರಿನ ಆನೇಕಲ್ ನಲ್ಲಿ ಪಟಾಕಿ ಗೋಡೌನ್ ನಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 14 ಜನರು ಸಜೀವವಾಗಿ ದಹನಗೊಂಡಿದ್ದಾರೆ. ಇದರ ಬೆನ್ನಲ್ಲೇ ಶಿವಮೊಗ್ಗದ ತೀರ್ಥಹಳ್ಳಿಯ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಮೂವರು ಸಜೀವ ದಹನಗೊಂಡಿದ್ದಾರೆ. ಇದೇ ವೇಳೆ ಮಂಡ್ಯದ ಮನ್ ಮುಲ್ ಮೆಗಾ ಡೈರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಘಟನೆಗಳ ನಡುವೆಯೇ ಕೊಡಗಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ತೊಂಡೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಹೊತ್ತಿಕೊಂಡ ಬೆಂಕಿಯಲ್ಲಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮೇಶ್ (48) ಎಂಬುವವರು ಸಾವನ್ನಪ್ಪಿದ್ದಾರೆ.
ರಮೇಶ್ ಪತ್ನಿ ರೂಪಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮೃತ ರಮೇಶ್ ಪತ್ನಿ ರೂಪಾ ಅವರೊಂದಿಗೆ ಕಳೆದ 8 ವರ್ಷಗಳಿಂದ ವಿಕಾಸ್ ಜನಸೇವಾ ಟ್ರಸ್ಟ್ ಆರಂಭಿಸಿದ್ದರು. ವೃದ್ಧಾಶ್ರಮವನ್ನು ನಡೆಸುತ್ತಿದ್ದರು. 36 ವೃದ್ಧರಿಗೆ ಆಶ್ರಯ ನೀಡಿದ್ದರು ಎಂದು ತಿಳಿದುಬಂದಿದೆ.