alex Certify ದೇಶದ ಮೊದಲ ವಿಮಾನ ನಿರ್ವಹಣೆ, ದುರಸ್ತಿ ಯೋಜನೆಗೆ ಚಾಲನೆ: 25 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಮೊದಲ ವಿಮಾನ ನಿರ್ವಹಣೆ, ದುರಸ್ತಿ ಯೋಜನೆಗೆ ಚಾಲನೆ: 25 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ನಿರೀಕ್ಷೆ

ಬೆಂಗಳೂರು: ಏರ್ ಇಂಡಿಯಾ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಾಜ್ಯದಲ್ಲಿ ವಿವಿಧ ಯೋಜನೆಗಳಿಗೆ 2,300 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ 2,300 ಕೋಟಿ ಯೋಜನೆಯ ಮಹತ್ವದ ಒಡಬಂಡಿಕೆಗೆ ಸಹಿ ಹಾಕಿವೆ.

ವಿಧಾನಸೌಧದಲ್ಲಿ ನಡೆದ ಒಡಂಬಡಿಕೆ ವಿನಿಮಯದ ಬಳಿಕ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಟಾಟಾ ಸಮೂಹದ ಈ ಹೂಡಿಕೆಯಿಂದ ನೇರವಾಗಿ 1,650 ಉದ್ಯೋಗಗಳು ಸೃಷ್ಟಿಯಾಗಲಿವೆ. ಒಟ್ಟು ಹೂಡಿಕೆಯ ಪೈಕಿ ಏರ್ ಇಂಡಿಯಾ ಕಂಪನಿಯು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಓವರ್-ಹಾಲ್ (ಎಂಆರ್ ಒ) ಘಟಕವನ್ನು ಸ್ಥಾಪಿಸಲು 1,300 ಕೋಟಿ ರೂ. ಹೂಡುತ್ತಿದೆ. ಇದರಿಂದಾಗಿ 1,200 ಜನರಿಗೆ ನೇರವಾಗಿ ಉದ್ಯೋಗ ಸಿಗಲಿದ್ದು, ಪರೋಕ್ಷವಾಗಿ 25 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ. ಇಡೀ ಭಾರತದಲ್ಲಿ ಇದು ಮೊಟ್ಟಮೊದಲ ಯೋಜನೆಯಾಗಿದೆ ಎಂದು ವಿವರಿಸಿದರು.

ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಕಂಪನಿಯು ಮೂರು ಯೋಜನೆಗಳಿಗೆ 1,030 ಕೋಟಿ ರೂ. ಬಂಡವಾಳ ಹೂಡಲಿದೆ. ಇವುಗಳ ಪೈಕಿ 420 ಕೋಟಿ ರೂ.ಗಳನ್ನು ಅದು ನಾಗರಿಕ ವಿಮಾನಗಳನ್ನು ಸರಕು ಸಾಗಣೆ ವಿಮಾನಗಳನ್ನಾಗಿ (ಫ್ರೈಟರ್) ಪರಿವರ್ತಿಸುವ ಘಟಕ ಸ್ಥಾಪನೆಗೆ ವಿನಿಯೋಗಿಸಲಿದೆ. ಜೊತೆಗೆ 310 ಕೋಟಿ ರೂ. ಹೂಡಿಕೆಯೊಂದಿಗೆ ಗನ್ ತಯಾರಿಕೆ ಘಟಕ ಮತ್ತು 300 ಕೋಟಿ ರೂ. ವೆಚ್ಚದಲ್ಲಿ ವಿಮಾನಯಾನ ಮತ್ತು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಿದೆ. ಇದರಿಂದ 450 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.

ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಮತ್ತು ಕೋಲಾರದಲ್ಲಿ ಟಿಎಎಸ್ಎಲ್ ಸ್ಥಾಪಿಸಲಿರುವ ಗನ್ ತಯಾರಿಕೆ ಘಟಕದ ಮೂಲಕ ತನಗೆ ಅಗತ್ಯವಿರುವ 13 ಸಾವಿರ ಬಿಡಿಭಾಗಗಳ ಪೈಕಿ ಶೇಕಡ 50ರಷ್ಟನ್ನು ಪೂರೈಸಿಕೊಳ್ಳುವ ಆಲೋಚನೆ ಹೊಂದಿದೆ. ಇದರಿಂದಾಗಿ 300ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ 2-3 ಸಾವಿರ ಜನರಿಗೆ ಉದ್ಯೋಗಗಳು ಸಿಗಲಿವೆ. 1939ರಷ್ಟು ಹಿಂದೆಯೇ ಬೆಂಗಳೂರಿನಲ್ಲಿ ಎಚ್ಎಎಲ್ ಸ್ಥಾಪನೆಯಾಗುವುದರೊಂದಿಗೆ ರಾಜ್ಯವು ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ರಕ್ಷಣಾ ಇಲಾಖೆಗೆ ಬೇಕಾಗುವ ವಿಮಾನಗಳು ಮತ್ತು ಹೆಲಿಕಾಪ್ಟರುಗಳ ಪೈಕಿ ಶೇಕಡ 67ರಷ್ಟು ಕರ್ನಾಟಕದಲ್ಲೇ ತಯಾರಾಗುತ್ತಿದೆ. ಜತೆಗೆ ದೇಶದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದ ರಫ್ತು ವಹಿವಾಟಿಗೆ ರಾಜ್ಯವು ಶೇಕಡ 65ರಷ್ಟು ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...