ಸಕ್ಕರೆ ದೈನಂದಿನ ಜೀವನದಲ್ಲಿ ವ್ಯಾಪಕವಾಗಿ ಬಳಸುವ ಆಹಾರ ಪದಾರ್ಥಗಳಲ್ಲೊಂದು. ಸಕ್ಕರೆ ಇಲ್ಲದಿದ್ದರೆ ಚಹಾದಿಂದ ಹಿಡಿದು ಬಹುತೇಕ ಎಲ್ಲಾ ಸಿಹಿತಿಂಡಿಗಳ ರುಚಿಯೂ ಅಪೂರ್ಣ. ಆದರೆ ಸಕ್ಕರೆಯ ಅತಿಯಾದ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ.
ಸಕ್ಕರೆಯನ್ನು ಅತಿಯಾಗಿ ಸೇವಿಸಿದರೆ ಸ್ಥೂಲಕಾಯತೆ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದಂತಹ ಸಮಸ್ಯೆಗಳು ಬರುತ್ತವೆ. ಇದು ನಮ್ಮ ಹಲ್ಲುಗಳ ಆರೋಗ್ಯಕ್ಕೆ ಕೂಡ ಒಳ್ಳೆಯದಲ್ಲ.
ಹಲ್ಲಿನ ಕುಳಿಗಳು
ಸಕ್ಕರೆಯ ಅತಿಯಾದ ಸೇವನೆಯು ಹಲ್ಲಿನ ಕುಳಿಗಳಿಗೆ ಮುಖ್ಯ ಕಾರಣವಾಗಬಹುದು. ಸಕ್ಕರೆಯನ್ನು ಅಧಿಕವಾಗಿ ಸೇವಿಸಿದಾಗ ಅದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ನಂತರ ಹಲ್ಲುಗಳಲ್ಲಿ ಆಮ್ಲವನ್ನು ಉತ್ಪಾದಿಸುತ್ತದೆ, ಇದು ಕೊಳೆಯುವಿಕೆಗೆ ಕಾರಣವಾಗುತ್ತದೆ.
ಕೆಟ್ಟ ಉಸಿರು
ಸಕ್ಕರೆಯನ್ನು ಸೇವಿಸಿದಾಗ ಬ್ಯಾಕ್ಟೀರಿಯಾಗಳು ತಮ್ಮ ಪರಿಣಾಮಗಳನ್ನು ತ್ವರಿತವಾಗಿ ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಬಾಯಿಯಲ್ಲಿ ಬಲವಾದ ವಾಸನೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸಿಹಿ ಪದಾರ್ಥಗಳನ್ನು ಸೇವಿಸಿದ ನಂತರ ನೀರಿನಿಂದ ಬಾಯಿ ಮುಕ್ಕಳಿಸಬೇಕು.
ಹಲ್ಲಿನ ಸೂಕ್ಷ್ಮತೆ
ತಿಂದ ನಂತರ ಹಲ್ಲುಗಳಲ್ಲಿ ಸಂದಿಯಲ್ಲಿ ಸಕ್ಕರೆ ಉಳಿದುಕೊಂಡರೆ ಅದು ಸೆನ್ಸಿಟಿವಿಟಿಗೆ ಕಾರಣವಾಗಬಹುದು. ಇದರಿಂದಾಗಿ ತಣ್ಣಗಿನ ಅಥವಾ ಬಿಸಿಯಾದ ವಸ್ತುಗಳನ್ನು ಸೇವಿಸಿದಾಗ ಜುಮ್ಮೆನ್ನುತ್ತದೆ.
ಹಲ್ಲಿನ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ಅನಾರೋಗ್ಯಕರ ಆಹಾರ. ಹೆಚ್ಚು ಸಕ್ಕರೆಯನ್ನು ಸೇವಿಸಿದಾಗ ಅದು ಹಲ್ಲು ಮತ್ತು ಒಟ್ಟಾರೆ ಬಾಯಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸಕ್ಕರೆ ಸೇವನೆಯನ್ನು ಮಿತಿಗೊಳಿಸುವುದು ಉತ್ತಮ.