
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಕಿರಣ್ ರಿಜಿಜು, ಜೆಪಿ ನಡ್ಡಾ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ನಡೆದ ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಭಾಶಯ ಕೋರದಿರುವುದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ. ಭಾರತದ ಸಂಸತ್ತಿನಲ್ಲಿ ನಡೆದ ಈ ಘಟನೆ ವಿಡಿಯೋವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಹಂಚಿಕೊಂಡಿದ್ದು, ಮುರ್ಮು ಅವರು ಬುಡಕಟ್ಟು ಸಮುದಾಯದಿಂದ ಬಂದವರಾಗಿರುವುದರಿಂದ ಅವರಿಗೆ ರಾಹುಲ್ ಶುಭ ಕೋರಿಲ್ಲ ಎಂದು ಆರೋಪಿಸಿದೆ.
ಇದೀಗ ಬಿಜೆಪಿ ನಾಯಕರು ಮತ್ತು ನೆಟಿಜನ್‌ಗಳು ಹಂಚಿಕೊಂಡಿರುವ ಈ ವಿಡಿಯೋ ಸಂಸತ್ತಿನಲ್ಲಿ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದ ಭಾಗವಾಗಿದೆ. ಸಮಾರಂಭವು ಭಾರತ ಸಂವಿಧಾನದ 75 ವರ್ಷಗಳ ಅಂಗೀಕಾರದ ಒಂದು ವರ್ಷದ ಆಚರಣೆಯನ್ನು ಆರಂಭಿಸಿದ್ದು, ಸಂವಿಧಾನವನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಗಿತ್ತು.