ಬೀದರ್: ದಲಿತ ಸಿಎಂ ಬಗ್ಗೆ ಚರ್ಚೆ ನಡೆಯುತ್ತಿರುವುದು ತಪ್ಪಲ್ಲ. ಚರ್ಚೆ ನಡೆದರೆ ತಪ್ಪೇನು? ದಲಿತ ಮುಖ್ಯಮಂತ್ರಿ ಆಗುವ ಸಮಯ, ಸಂದರ್ಭ ಬರಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ನಾಯಕರು ಒಟ್ಟಾಗಿ ಸೇರುವುದರಲ್ಲಿ ತಪ್ಪೇನಿದೆ? ಸಮುದಾಯದ ಅಭಿವೃದ್ಧಿ ಬಗ್ಗೆ ನಾಯಕರು ಒಂದೆಡೆ ಸೇರಿ ಚರ್ಚಿಸುತ್ತಾರೆ.ಐದು ವರ್ಷ ನಮ್ಮ ಸರ್ಕಾರ ಇರುತ್ತೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ. ಯಾವಾಗ ಬೇಕಾದರೂ ಸಚಿವ ಸಂಪುಟ ಪುನಾರಚನೆ ಆಗಬಹುದು. ಸಚಿವ ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದ್ದಾರೆ.
ವಿರೋಧ ಪಕ್ಷದವರು ಒಳ್ಳೆಯ ಸಲಹೆ, ಟೀಕೆ ಮಾಡಿದ್ದರೆ ಒಪ್ಪಿಕೊಳ್ಳಬಹುದು. ಬಾಯಿಗೆ ಬಂದಂತೆ ಮಾತನಾಡಿದರೆ ಅದಕ್ಕೆ ಉತ್ತರಿಸುವುದಿಲ್ಲ. ವಿರೋಧಪಕ್ಷದವರು ಪ್ರಚಾರಕ್ಕಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ದೂರಿದ್ದಾರೆ.