ತುಮಕೂರು: ಅನುಮತಿ ಪಡೆಯದೇ ಗೋದಾಮಿನಲ್ಲಿ ಕುಕ್ಕರ್, ಡಿನ್ನರ್ ಸೆಟ್ ಸಂಗ್ರಹಿಸಿದ್ದ ನಾಲ್ವರು ಕಾಂಗ್ರೆಸ್ ಮುಖಂಡರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ತಲಾ 50,000 ರೂ. ದಂಡ ವಿಧಿಸಲಾಗಿದೆ.
ಕುಣಿಗಲ್ ತಾಲೂಕಿನ ವಿವಿಧ ಕಡೆಗಳಲ್ಲಿ ವಿಧಾನಸಭೆ ಚುನಾವಣೆಗೆ ಮೊದಲು ಮತದಾರರಿಗೆ ವಿತರಿಸಲು ನಾಲ್ಕು ಲಾರಿ ಲೋಡ್ ಡಿನ್ನರ್ ಸೆಟ್, ಕುಕ್ಕರ್ ದಾಸ್ತಾನು ಮಾಡಲಾಗಿತ್ತು. ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಜಗದೀಶ್ ನೀಡಿದ ದೂರಿನ ಮೇರೆಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು.
ಬಿಲ್ ನಲ್ಲಿ ನಮೂದಿಸಲಾದ ಗೋದಾಮಿನ ಸ್ಥಳಕ್ಕೂ ಮತ್ತು ಸಂಗ್ರಹವಾದ ಸ್ಥಳಕ್ಕೂ ತಾಳೆ ಇರಲಿಲ್ಲ. ಹೀಗಾಗಿ ಕುಣಿಗಲ್ ಕಾಂಗ್ರೆಸ್ ಮುಖಂಡರಾದ ಚೇತನ್, ರಂಗಣ್ಣ ಗೌಡ, ಹುಲ್ಲೂರಯ್ಯ ಮತ್ತು ಎಸ್.ಹೆಚ್. ಎಂಟರ್ ಪ್ರೈಸಸ್ ಗೆ ದಂಡ ವಿಧಿಸಲಾಗಿದೆ. ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.