ಮಂಗಳೂರು: ಯುವಕರಿಗೆ ಉದ್ಯೋಗ ಸೃಷ್ಟಿಸಲು ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೊಳಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಪುತ್ತೂರಿನ ಕೊಂಬೆಟ್ಟುವಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಶಾಸಕ ಅಶೋಕ್ ರೈ ಸಾರಥ್ಯದ ರೈ ಎಸ್ಟೇಟ್ಸ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ಅಶೋಕ ಜನ ಮನ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡ ಕರಾವಳಿಯಲ್ಲಿ ಮನಸ್ಸುಗಳ ನಡುವೆ ಶಾಂತಿ ಕದಡಿದೆ. ಕೋಮುಗಲಭೆ ಸೇರಿ ಇತರೆ ಸಮಸ್ಯೆಯಿಂದ ಬೇರೆ ಕಡೆಯಿಂದ ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ. ಇಲ್ಲಿ ಸ್ಥಾಪನೆಯಾದ ಅನೇಕ ಬ್ಯಾಂಕುಗಳು ಮಾಯವಾಗಿದೆ. ಇಲ್ಲಿನ ಯುವಕರು ಸೌದಿ ಅರೇಬಿಯಾ, ಬೆಂಗಳೂರು, ಮುಂಬೈಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಇದನ್ನು ಸರಿಪಡಿಸಲು ಉದ್ಯೋಗ ಸೃಷ್ಟಿಸಬೇಕು. ಇದಕ್ಕಾಗಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೊಳಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.