ಬೆಂಗಳೂರು: ಯಾವುದೇ ಹಾಲಿನ ದರ ಏರಿಕೆ ಮಾಡಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕೆಎಂಎಫ್ ನಿಂದ ಹಾಲಿನ ಪ್ರಮಾಣ ಜಾಸ್ತಿ ಮಾಡಿದೆ. ಪ್ರಮಾಣ ಜಾಸ್ತಿ ಮಾಡಿರುವುದರಿಂದ ದರ ಹೆಚ್ಚಾಗಿದೆ. ಆದರೆ, ಎರಡು ರೂಪಾಯಿ ದರ ನಿಗದಿ ಮಾಡಲಾಗಿದೆ. 10 ಪೈಸೆ ಬಿಟ್ಟು ಬೆಲೆ ನಿಗದಿ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ಸಿಎಂ ಹೇಳಿದ್ದಾರೆ.
“ರಾಜ್ಯದಲ್ಲಿ ಹಾಲಿನ ಬೆಲೆ ಹೆಚ್ಚಳವಾಗಿಲ್ಲ. ಈ ಮೊದಲು ಲಭ್ಯವಾಗುತ್ತಿದ್ದ ಹಾಲಿನ ಪ್ಯಾಕೆಟ್‌ಗಳಲ್ಲಿ ಹೆಚ್ಚುವರಿಯಾಗಿ 50 ಎಂ.ಎಲ್ ಹಾಲನ್ನು ಸೇರಿಸಿ ಕೊಡಲಾಗುತ್ತಿದೆ. 27 ಲಕ್ಷ ಹೈನುಗಾರರು ಹಾಗೂ ಹೈನುಗಾರಿಕೆ ಮೇಲೆ ಅವಲಂಬಿತರಾಗಿರುವ ಕುಟುಂಬದವರ ಮೇಲಿನ ಹಿತದೃಷ್ಟಿಯಿಂದ ಹಾಗೂ ಗ್ರಾಹಕರಿಗೆ ಹೊರೆಯಾಗದಂತೆ ಹೆಚ್ಚುವರಿ ಹಾಲಿಗೆ ತಕ್ಕಂತೆ ಹೆಚ್ಚುವರಿಯಾಗಿ 2 ರೂ. ಬೆಲೆ ನಿಗದಿಪಡಿಸಲಾಗಿದೆ. ಅದರಂತೆ 1,000 ಎಂ.ಎಲ್ ಹಾಲಿನ ಪ್ಯಾಕೆಟ್‌ನಲ್ಲಿ 1050 ಎಂ.ಎಲ್ ಹಾಲು ಇರಲಿದೆ. 500 ಎಂ.ಎಲ್ ಹಾಲಿನ ಪ್ಯಾಕೇಟ್‌ನಲ್ಲಿ 550 ಎಂ.ಎಲ್. ಇರಲಿದೆ” ಎಂದು ತಿಳಿಸಿದ್ದಾರೆ.