ಕೋಲಾರ: ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಮೋದಿ ಪ್ರಧಾನಿ ಆದರೆ ದೇಶ ಬಿಡುವುದಾಗಿ ದೇವೇಗೌಡರು ಹೇಳಿದ್ದರು. ಈಗ ಒಂದಾಗಿದ್ದಾರೆ. ಲೋಕಸಭೆ ಚುನಾವಣೆಗಾಗಿ ಬಿಜೆಪಿ, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಟೀಕಿಸಿದ್ದಾರೆ.
ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಭ್ರಮೆಯಲ್ಲಿದ್ದಾರೆ. ಆದರೆ, ಐದು ವರ್ಷ ನಮ್ಮ ಸರ್ಕಾರ ಇರಲಿದೆ. ಕೋಮುವಾದಿ ಪಕ್ಷದ ಜೊತೆ ಹೋಗಿರುವ ನೀವು ಜಾತ್ಯಾತೀತ ಪದ ತೆಗೆಯಿರಿ ಎಂದು ಜೆಡಿಎಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಇದನ್ನು ಹೇಳಿದ್ದಕ್ಕೆ ಸಿದ್ದರಾಮಯ್ಯಗೆ ಗರ್ವ ಬಂದಿದೆ. ಅವರ ಗರ್ವಭಂಗ ಮಾಡುತ್ತೇವೆ ಎಂದು ಕಿಡಿ ಕಾರುತ್ತಿದ್ದಾರೆ. ನಾವು ನುಡಿದಂತೆ ನಡೆದಿದ್ದೇವೆ. ಜನತೆ ಕಾಂಗ್ರೆಸ್ ಕೈ ಹಿಡಿಯುತ್ತಾರೆ. ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದ್ದಾರೆ.