ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ದೃಢವಾಗಿ ನಿಂತಿರುವ ಕಾಂಗ್ರೆಸ್ ಮುಡಾ ನಿವೇಶನ ಆರೋಪ ಸಂಬಂಧ ಕಾನೂನು ಹೋರಾಟ ಮತ್ತು ಜನಾಂದೋಲನ ಕೈಗೊಳ್ಳಲು ನಿರ್ಧರಿಸಿದೆ.
ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜಭವನ ಅನುಮತಿ ನೀಡಿದರೂ ಅದನ್ನು ಕೋರ್ಟ್ ನಲ್ಲಿ ಪ್ರಶ್ನಿಸಿ ಕಾನೂನು ರೀತಿ ಹೆಜ್ಜೆ ಇಡಲು ಸಂದೇಶ ರವಾನಿಸಲಾಗಿದೆ. ದೆಹಲಿ ಪ್ರವಾಸದಿಂದ ರಾಜ್ಯಪಾಲರು ಬೆಂಗಳೂರಿಗೆ ವಾಪಸ್ ಆಗಿದ್ದು, ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿಸಿದೆ.
ಭಾನುವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸಿಂಗ್ ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಿ ಸಿಎಂ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಿಎಂ, ಡಿಸಿಎಂ ಸಂಪುಟ ಸದಸ್ಯರೊಂದಿಗೆ ಸಭೆ ನಡೆಸಿ ಮುಂದಿನ ಹೋರಾಟಗಳಿಗೆ ಚರ್ಚೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪಿತೂರಿ ನಡೆಸಿರುವ ಬಿಜೆಪಿಯನ್ನು ಎಲ್ಲಾ ಸಚಿವರು ಒಟ್ಟಾಗಿ ಎದುರಿಸಬೇಕು. ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಬೇಕು. ಬಿಜೆಪಿ ಇನ್ನೊಂದು ಸಲ ಇಂತಹ ದುಸ್ಸಾಹಸಕ್ಕೆ ಕೈಹಾಕಲು ಹೆದರುವಂತೆ ಪಾಠ ಕಲಿಸಬೇಕು ಎಂದು ಸಚಿವರಿಗೆ ಕೆ.ಸಿ. ವೇಣುಗೋಪಾಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯನವರ ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರು ಹೊಸದಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಂದಿಲ್ಲ. ಅವರ ಸಿದ್ಧಾಂತ, ವೈಚಾರಿಕತೆ, ರಾಜಕೀಯ ಬದುಕಿನ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ನಿರ್ದಿಷ್ಟ ಆರೋಪದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಅದರ ಬದಲಿಗೆ ಪ್ರತಿದಿನ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡುತ್ತಿರುವ ಭ್ರಷ್ಟಾಚಾರದ ಆರೋಪ ಹೊರಿಸುತ್ತಿರುವ ವಿಪಕ್ಷಗಳ ನಡೆ ಸರಿಯಲ್ಲ ಎಂದು ವೇಣುಗೋಪಾಲ್ ಹೇಳಿದ್ದಾರೆ.