ಬೆಂಗಳೂರು : ಬೆಂಗಳೂರು ಸೇಫ್ ಸಿಟಿ ಯೋಜನೆಯ ಭಾಗವಾಗಿ ಬೆಂಗಳೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಕಮಾಂಡ್ ಸೆಂಟರ್ ಅನ್ನು ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು.
ವಸಂತನಗರದಲ್ಲಿರುವ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಪಕ್ಕದಲ್ಲಿರುವ ಕಟ್ಟಡವನ್ನು ಬೆಳಿಗ್ಗೆ 11 ಗಂಟೆಗೆ ಉದ್ಘಾಟಿಸಿದರು.
ಏನಿದರ ವಿಶೇಷತೆ..?
ನಿರ್ಭಯಾ ನಿಧಿಯಡಿ 661 ಕೋಟಿ ರೂ. ವೆಚ್ಚದಲ್ಲಿ ಸೇಫ್ ಸಿಟಿ ಯೋಜನೆಯನ್ನು ರೂಪಿಸಲಾಗಿದೆ. ನಗರದ 3 ಸಾವಿರ ಸ್ಥಳಗಳಲ್ಲಿ 7500 ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ 3000 ಕ್ಯಾಮೆರಾಗಳು ಅಳವಡಿಕೆ ಆಗಿದ್ದು, ಇನ್ನುಳಿದ ಕ್ಯಾಮೆರಾಗಳ ಹಾಕುವ ಕಾರ್ಯಪ್ರಗತಿಯಲ್ಲಿದೆ.
ಮೊದಲ ಹಂತದಲ್ಲಿ, 4,100 ಕಣ್ಗಾವಲು ಕ್ಯಾಮೆರಾಗಳು, 30 ಸುರಕ್ಷತಾ ದ್ವೀಪಗಳು, 96 ವೀಕ್ಷಣಾ ಕೇಂದ್ರಗಳು ಮತ್ತು ಕ್ಯಾಮೆರಾಗಳೊಂದಿಗೆ ಎಂಟು ಡ್ರೋನ್ಗಳೊಂದಿಗೆ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. 3,000 ಪ್ರಮುಖ ಪ್ರದೇಶಗಳಲ್ಲಿ 7,500 ಸಿಸಿಟಿವಿ ಕ್ಯಾಮೆರಾಗಳು, 158 ವೀಕ್ಷಣಾ ಕೇಂದ್ರಗಳು ಇರಲಿದೆ.
ಕ್ಯಾಮೆರಾಗಳ ಪೈಕಿ 6200 ಸ್ಥಿರ ಕ್ಯಾಮೆರಾ, 800 ಪಿಟಿಜಡ್ ಕ್ಯಾಮೆರಾ ಹಾಗೂ 400 ಹೈ ರೆಸಲೂಷನ್ ಕ್ಯಾಮೆರಾಗಳಿದ್ದು, ಕ್ಯಾಮೆರಾಗಳು ಸೆರೆ ಹಿಡಿಯುವ ದೃಶ್ಯಗಳು ನೇರ ಪ್ರಸಾರವಾಗಲಿವೆ. ಹಾಗೆಯೇ ಅವುಗಳಲ್ಲಿ ತಾನಾಗಿಯೇ ಚಿತ್ರೀಕರಣವಾಗಲಿದೆ. ಹಾಗೂ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ನಗರದಲ್ಲಿ ಸಂಚರಿಸಿದರೆ ಕೂಡಲೇ ಮಾಹಿತಿ ಲಭ್ಯವಾಗುತ್ತೆ.
ಕಮಾಂಡ್ ಸೆಂಟರ್ನಲ್ಲಿ ಸಿಬ್ಬಂದಿಗಳು ದಿನದ 24 ಗಂಟೆಗಳು ಹದ್ದಿನ ಕಣ್ಣಿಡಲಿದ್ದು, ಕಾನೂನು ಸುವ್ಯವಸ್ಥೆ ಧಕ್ಕೆಯಾಗುವ ಘಟನೆಗಳು ನಡೆದರೆ ಅತ್ಯಾಧುನಿಕ ಸಿಸಿ ಕ್ಯಾಮರಗಳು ವಿಡಿಯೋ ಸೆರೆಹಿಡಿದು ಕೂಡಲೇ ಆಯಾ ಪೊಲೀಸ್ ಠಾಣೆಗಳ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನಿಸುತ್ತದೆ.