ಚಿತ್ರದುರ್ಗ: ಜನ ಕಲ್ಯಾಣವೇ ನಮ್ಮ ಸರ್ಕಾರದ ಜನಪರ ನೀತಿಯಾಗಿದೆ. ನಾಡಿನ ಜನರು ಶ್ರೀಮಂತರಾದರೆ, ನಾಡು ಶ್ರೀಮಂತವಾಗುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಕೈಗೆ ಸರ್ಕಾರದ ಯೋಜನೆಗಳು ನೇರವಾಗಿ ತಲುಪವಂತೆ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆ ಎಂಬುದನ್ನು ತಿಳಿಸುವುದು ಫಲಾನುಭವಿಗಳ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿತ್ರದುರ್ಗ ನಗರದ ಮುರುಘಾರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಶನಿವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಹಾಗೂ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 1,484.69 ಕೋಟಿ ರೂ.ಗೂ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪ್ರಸಕ್ತ ವರ್ಷದಿಂದ ಭೂಸಿರಿ ಯೋಜನೆ ಜಾರಿ :
ರೈತರು, ಮಹಿಳೆಯರು, ಯುವಕ ಯುವತಿಯುರು, ದೀನದಲಿತರು ಸೇರಿದಂತೆ ಎಲ್ಲಾ ವರ್ಗದ ಶ್ರೇಯೋಭಿವೃದ್ಧಿಗಾಗಿ ದೂರದೃಷ್ಟಿ ಯೋಜನೆಗಳನ್ನು ನಮ್ಮ ಸರ್ಕಾರದಲ್ಲಿ ಅವಳವಡಿಸಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಭೂ ಸಿರಿ ಯೋಜನೆ ಜಾರಿಗೆ ತರಲಾಗುತ್ತಿದೆ. ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಅನುಕೂಲವಾಗುವಂತೆ 10,000 ರೂ. ಗಳನ್ನು ರೈತರ ಖಾತೆ ಜಮೆ ಮಾಡಲಾಗುವುದು. ಬಿತ್ತನೆ ಬೀಜ, ಗೊಬ್ಬರ ಖರೀದಿಗಾಗಿ ರೈತರು ಸಾಲ ಮಾಡದಂತೆ ತಡೆಯುಲು ಯೋಜನೆ ಜಾರಿಗೊಳಿಸಲಾಗುತ್ತಿದೆ.
ಮನೆ ಖರ್ಚು ನಿಭಾಯಿಸಲು ಹೆಣ್ಣು ಮಕ್ಕಳಿಗೆ ಮಾಸಿಕ 1000 ರೂ., ದುಡಿಯವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂ. ಅನುದಾನ, ಸ್ವಾಮಿ ವಿವೇಕಾನಂದ ಯೋಜನೆಯಡಿ ಯುವಕರ ಸಂಘಕ್ಕೆ 2 ಲಕ್ಷ ರೂ. ಅನುದಾನ ನೀಡಿ, ಸಂಘದ ಉತ್ಪನಗಳಿಗೆ ಮಾರುಕಟ್ಟೆ ಒದಗಿಸಲಾಗುವುದು. ಕಾಯಕ ಯೋಜನೆಯಡಿ ಗುಡಿ ಕೈಗಾರಿಕೆ ಸೇರಿದಂತೆ ಕಮ್ಮಾರಿಕೆ, ಕುಂಬಾರಿಕೆ, ಬಡಗಿ ಹಾಗೂ ಇತರೆ ವಿಶ್ವಕರ್ಮ ಕಾಯಕಗಳನ್ನು ಉನ್ನತಿಕರಿಸಲು ರೂ.50 ಸಾವಿರ ಅನುದಾನ ನೀಡಲಾಗುವುದು. ಈ ಬಾರಿ ಸರ್ಕಾರಿ ಕಾಲೇಜುಗಳಲ್ಲಿ ಓದುವ ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅನುಮೋದನೆ: ಚಿತ್ರದುರ್ಗ ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಒಂದು ವಾರದಲ್ಲಿ ಅನುಮೋದನೆ ನೀಡುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದರು. ಶೀಘ್ರದಲ್ಲಿ ಮತ್ತೊಮ್ಮೆ ಚಿತ್ರದುರ್ಗ ನಗರಕ್ಕೆ ಆಗಮಿಸಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಯನ್ನೂ ನೆರವೇರಿಸುವುದಾಗಿ ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಗಳು ದಲಿತರಿಗೆ, ಪರಿಶಿಷ್ಟ ಪಂಗಡಕ್ಕೆ ಅವಶ್ಯಕವಾಗಿರುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಪರಿಶಿಷ್ಟ ಜಾತಿಗೆ ಶೇ.15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿ ಪರಿಶಿಷ್ಟ ವರ್ಗದವರ ಹೃದಯ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ರಾಜ್ಯದ ರೈತರು ಸಶಕ್ತವಾಗುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಒಟ್ಟು 10 ಸಾವಿರ ರೂ. ಗಳನ್ನು ವರ್ಷಕ್ಕೆ ಮೂರು ಕಂತುಗಳಲ್ಲಿ ರೈತರಿಗೆ ಕೊಡಲಾಗುತ್ತಿದೆ. ರೈತರ ಮಕ್ಕಳಿಗೆ ಮುಖ್ಯಮಂತ್ರಿ ರೈತವಿದ್ಯಾನಿಧಿ ಮೂಲಕ ಕಳೆದ ವರ್ಷ ರಾಜ್ಯದಲ್ಲಿ 10 ಲಕ್ಷ ಮಕ್ಕಳಿಗೆ 686 ಕೋಟಿ ರೂ. ನೀಡಿದೆ ಎಂದರು.
ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, 18 ಲಕ್ಷ ಜನಸಂಖ್ಯೆ ಇರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯದ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 9 ಲಕ್ಷ ಫಲಾನುಭವಿಗಳಾಗಿದ್ದಾರೆ. ರೈತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲ ವರ್ಗದವರಿಗೆ ರಾಜ್ಯದ ಮುಖ್ಯಮಂತ್ರಿಗಳು ಸೌಲಭ್ಯ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್, ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗೂ ಶಾಸಕ ಡಾ. ವೈ.ಎ ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಗೂಳಿಹಟ್ಟಿ ಡಿ ಶೇಖರ್, ಲಿಡ್ಕರ್ ಅಧ್ಯಕ್ಷ ಹಾಗೂ ಮಾಯಕೊಂಡ ಶಾಶಕ ಪ್ರೊ. ಲಿಂಗಣ್ಣ, ಶಾಸಕರಾದ ಪೂರ್ಣಿಮಾ ಕೆ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರುಗಳಾದ ಚಿದಾನಂದ ಎಂ ಗೌಡ, ಕೆ.ಎಸ್. ನವೀನ್, ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ ಸುರೇಶ್, ನಗರಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ಪ್ರಸಾತ್ ಮನೋಹರ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ.ಎಂ.ಎಸ್. ಪೆÇಲೀಸ್ ವರಿμÁ್ಠಧಿಕಾರಿ ಪರುಶುರಾಮ.ಕೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.