ಬಿಹಾರದ ರೋಹ್ತಾಸ್ ಜಿಲ್ಲೆಯ ಸಸಾರಾಮ್‌ನಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪದ ಮೇಲೆ ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ಘರ್ಷಣೆಯಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ.
ಮೃತ ಬಾಲಕನ ಕುಟುಂಬ ಮತ್ತು ಪರಿಚಯಸ್ಥರು ಆತನ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿ ಶುಕ್ರವಾರ ಗ್ರ್ಯಾಂಡ್ ಟ್ರಂಕ್ ರಸ್ತೆ (ರಾಷ್ಟ್ರೀಯ ಹೆದ್ದಾರಿ 2) ಯನ್ನು ತಡೆದು ಹಲವಾರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಳಿಸಿದ್ದರು.
ಪರೀಕ್ಷಾ ಹಾಲ್‌ನಲ್ಲಿ ನಕಲು ಮಾಡಿದ್ದಕ್ಕೆ ಗುರುವಾರ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ವಾಗ್ವಾದ ಪ್ರಾರಂಭವಾಗಿ ನಂತರ ಹಿಂಸಾತ್ಮಕ ಘರ್ಷಣೆಗೆ ತಿರುಗಿತು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಸಂತ್ರಸ್ತರು ಗುರುವಾರ ಸಂಜೆ 5.15 ರ ಸುಮಾರಿಗೆ ತಮ್ಮ ಪರೀಕ್ಷೆಯ ನಂತರ ಮನೆಗೆ ಹಿಂದಿರುಗುತ್ತಿದ್ದರು. ಎನ್‌ಎಚ್-2 ರ ಸೇತುವೆಯ ಮೇಲೆ ಮತ್ತೊಂದು ಗುಂಪಿನ ವಿದ್ಯಾರ್ಥಿಗಳು ವಾಹನವನ್ನು ಅಡ್ಡಗಟ್ಟಿದ್ದಾರೆ.
“ಈ ವೇಳೆ ಗುಂಡು ಹಾರಿಸಲಾಗಿದ್ದು, ಅಮಿತ್ ಕುಮಾರ್ ಮತ್ತು ಸಂಜೀತ್ ಕುಮಾರ್ ಗಾಯಗೊಂಡರು. ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರನ್ನೂ ಸದರ್ (ಜಿಲ್ಲಾ) ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಅವರನ್ನು ನಾರಾಯಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಯಿತು” ಎಂದು ರೋಹ್ತಾಸ್ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಚಿಕಿತ್ಸೆ ಪಡೆಯುತ್ತಿದ್ದ ಅಮಿತ್ ಶುಕ್ರವಾರ ಸಾವನ್ನಪ್ಪಿದ್ದು, ನಂತರ ಪರಿಸ್ಥಿತಿ ಕೈಮೀರಿದೆ. ಅವರ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಗ್ರಾಮಸ್ಥರು ಎನ್‌ಎಚ್-2 ಅನ್ನು ತಡೆದು ಅವರ ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ಮೃತ ಬಾಲಕನಿಗೆ ನ್ಯಾಯ ಒದಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಭರವಸೆ ನೀಡಿದ ನಂತರವೇ ಪ್ರತಿಭಟನಾಕಾರರು ಮಣಿದಿದ್ದು, ಗುಂಡಿನ ದಾಳಿಯಲ್ಲಿ ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.