ಮೈಸೂರಿನಲ್ಲಿ ಪತ್ರಿಕೆ ವಿತರಕರ ಪುತ್ರಿಯೊಬ್ಬಳು ಡಾಕ್ಟರ್ ಆಗುವ ಕನಸನ್ನು ನನಸು ಮಾಡಿದ್ದು ಕುಟುಂಬ ಸೇರಿದಂತೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಗರದ ಪತ್ರಿಕೆ ವಿತರಕ ನಾಗರಾಜು ಮತ್ತು ನಾಗಲಾಂಬಿಕೆ ದಂಪತಿಯ ಪುತ್ರಿ ಡಾ.ಎನ್.ಸುಮಾ ಭಾರತಿ ಅವರು ವೈದ್ಯೆಯಾಗುವ ಕನಸನ್ನು ನನಸಾಗಿಸಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (RGUHS) ಎಂಬಿಬಿಎಸ್ ಪದವಿ ಪ್ರಮಾಣಪತ್ರವನ್ನು ನೀಡಿದೆ.
ಸಂಪೂರ್ಣ ಸಮರ್ಪಣಾ ಮನೋಭಾವ ಮತ್ತು ದೃಢಸಂಕಲ್ಪದಿಂದ ಕನಸುಗಳನ್ನು ನನಸು ಮಾಡಿದ ಸುಮಾ ಭಾರತಿ ವಿಶೇಷ ತರಬೇತಿ ಪಡೆಯದೇ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ಹೆದ್ದಾರಿಯ ಬೆಳ್ಳೂರಿನ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಸರ್ಕಾರಿ ಸೀಟು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಕೇವಲ ಪ್ರಭಾವ ಮತ್ತು ಹಣದಿಂದ ವೈದ್ಯಕೀಯ ಸೀಟು ಸಿಗುತ್ತದೆ ಎಂಬ ಸಾಮಾನ್ಯ ಗ್ರಹಿಕೆಯನ್ನು ಬದಿಗೊತ್ತಿ ಆಕೆ ಇದೀಗ ವೈದ್ಯೆಯಾಗಿದ್ದಾರೆ.
ಕಳೆದ 40 ವರ್ಷಗಳಿಂದ ದಿನಪತ್ರಿಕೆ ವಿತರಕರಾಗಿ ಕೆಲಸ ಮಾಡುತ್ತಿರುವ ನಾಗರಾಜ್ ಅವರು ಹಣಕಾಸಿನ ಮುಗ್ಗಟ್ಟಿನ ನಡುವೆಯೂ ತಮ್ಮ ಮಗಳು ವೈದ್ಯೆಯಾಗುವ ಗುರಿಯನ್ನು ಸಾಧಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು.
ಆಕೆಯ ಪೋಷಕರು ನಾಗರಾಜು ಮತ್ತು ನಾಗಲಾಂಬಿಕೆ, ಸಹೋದರ ಎನ್.ಕರ್ಣ ಅವರು ಪ್ರಮಾಣ ಪತ್ರ ಸ್ವೀಕರಿಸುವಾಗ ವೇದಿಕೆಯಲ್ಲಿದ್ದು ಖುಷಿಪಟ್ಟಿದ್ದಾರೆ.
ಇದೇ ವೇಳೆ ನಾಗರಾಜು ಅವರು ತಮ್ಮ ಮಗಳಿಗೆ ಆರ್ಥಿಕ ನೆರವು, ಅಧ್ಯಯನ ಸಾಮಗ್ರಿಗಳು, ಲೇಖನ ಸಾಮಗ್ರಿಗಳು ಮತ್ತು ಇತರ ಸಣ್ಣ ಕೊಡುಗೆಗಳನ್ನು ನೀಡಿದ ಮೈಸೂರು ಜಿಲ್ಲಾ ಪತ್ರಿಕೆ ವಿತರಕರ ಸಂಘ, ಮಾಜಿ ಶಾಸಕ ವಾಸು ಮತ್ತು ಪತ್ರಿಕೆ ಓದುಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.