ಬೆಂಗಳೂರು: ಮೃತ ನೌಕರ ಮಕ್ಕಳಿಲ್ಲದ ವಿಚ್ಛೇದಿತನಾಗಿದ್ದರೆ ಆತನ ಸಹೋದರರು ಅನುಕಂಪದ ನೌಕರಿಗೆ ಅರ್ಹರು ಎಂದು ಹೇಳಲಾಗಿದೆ.
ವಿಚ್ಛೇದಿತ ಸರ್ಕಾರಿ ಉದ್ಯೋಗಿ ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ಅವರಿಗೆ ಮಕ್ಕಳಿಲ್ಲದಿದ್ದರೆ ಅವರನ್ನು ಅವಿವಾಹಿತ ಎಂದು ಪರಿಗಣಿಸಿ ಅವರಿಗೆ ಅವಲಂಬಿತರಾಗಿರುವ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸ್ಪಷ್ಟನೆ ನೀಡಿದೆ.
ಕರ್ನಾಟಕ ಸಿವಿಲ್ ಸೇವಾ ಅನುಕಂಪ ಆಧಾರದ ಮೇಲೆ ನೇಮಕಾತಿ ನಿಯಮಗಳ ಅನ್ವಯ ಸೇವೆಯಲ್ಲಿರುವಾಗಲೇ ಸರ್ಕಾರಿ ನೌಕರ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ.
ವಿವಾಹಿತ ಸರ್ಕಾರಿ ನೌಕರ ಮೃತಪಟ್ಟಲ್ಲಿ ಅವರ ಪತಿ ಅಥವಾ ಪತ್ನಿ ಮಗಳಿಗೆ ಅನುಕಂಪದ ನೇಮಕಾತಿಗೆ ಅವಕಾಶವಿದೆ. ಅವಿವಾಹಿತ ಸರ್ಕಾರಿ ನೌಕರರು ಮೃತಪಟ್ಟರೆ ಅವರ ಸಹೋದರ ಅಥವಾ ಸಹೋದರಿಗೆ ಅವಕಾಶವಿದೆ. ವಿಚ್ಛೇದಿತ ಪುರುಷ ಅಥವಾ ಮಹಿಳಾ ಸರ್ಕಾರಿ ನೌಕರರು ಮೃತಪಟ್ಟಲ್ಲಿ ಪತಿ ಅಥವಾ ಪತ್ನಿ ಕಾನೂನಾತ್ಮಕವಾಗಿ ಆ ನೌಕರರಿಂದ ಬೇರ್ಪಟ್ಟಿರುವುದರಿಂದ ಅವರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡಲು ಅವಕಾಶ ಇರುವುದಿಲ್ಲ.
ವಿಚ್ಛೇದಿತ ನೌಕರರ ಮಕ್ಕಳು ಅವರಿಗೆ ಅವಲಂಬಿತರಾಗಿದ್ದರೆ, ಅವರೊಂದಿಗೆ ವಾಸಿಸುತ್ತಿದ್ದರೆ, ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬಹುದು. ವಿಚ್ಛೇದಿತ ಸರ್ಕಾರಿ ನೌಕರರು ಮೃತಪಟ್ಟಿದ್ದಲ್ಲಿ ಅವರಿಗೆ ಮಕ್ಕಳಿಲ್ಲದ ಸಂದರ್ಭದಲ್ಲಿ ಅವರ ಸಹೋದರ ಅಥವಾ ಸಹೋದರಿಗೆ ಅವಕಾಶ ಕೊಡಬಹುದೇ ಎನ್ನುವ ಬಗ್ಗೆ ಹಲವು ಇಲಾಖೆಗಳು ಸ್ಪಷ್ಟನೆ ಕೇಳಿವೆ.
ಅಂತಹ ಸಂದರ್ಭದಲ್ಲಿ ಅವರನ್ನು ಅವಿವಾಹಿತ ಸರ್ಕಾರಿ ನೌಕರ ಎಂದು ಪರಿಗಣಿಸಿ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಬಹುದು. ಆದರೆ ಮೃತರಿಗೆ ಅವಲಂಬಿತರು ಎಂಬುದು ಸಾಬೀತಾಗಬೇಕು. ಷರತ್ತು ಮತ್ತು ನಿಬಂಧನೆಗಳಿಗೆ ಬದ್ಧವಾಗಿ ಅನುಕಂಪದ ನೌಕರಿ ನೀಡಬಹುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಸ್ಪಷ್ಟನೆ ನೀಡಿ ಆದೇಶ ಹೊರಡಿಸಲಾಗಿದೆ.