ಚಿಕ್ಕಮಗಳೂರು: ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ಚಿಕ್ಕಮಗಳೂರು ಜಿಲ್ಲೆಯ ಗ್ರಾಮವೊಂದರಲ್ಲಿ ಸಂಭ್ರಮಾಚರಣೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಗ್ರಾಮಸ್ಥರು, ಚೈತ್ರಾ ಕುಂದಾಪುರ ಬಂಧನ ಸುದ್ದಿ ಕೇಳುತ್ತಿದ್ದಂತೆಯೇ ಸಂಭ್ರಮಿಸಿದ್ದಾರೆ. ಅಲ್ಲದೇ ಚೈತ್ರಾ ಕುಂದಾಪುರ ಗ್ರಾಮದಲ್ಲಿ ಓಡಾಡಿದ ಸ್ಥಳಗಳನ್ನು ತೀರ್ಥ ಹಾಕಿ ಶುದ್ಧೀಕರಿಸಿದ್ದಾರೆ.
ಇಷ್ಟಕ್ಕೂ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ಮಾವಿನಕಟ್ಟೆ ಗ್ರಾಮಸ್ಥರು ಸಂಭ್ರಮಿಸಲು ಕಾರಣವೇನು? ಎಂಬುದನ್ನು ನೋಡುವುದಾದರೆ 2022ರ ಅಕ್ಟೋಬರ್ 4ರಂದು ‘ಹಿಂದೂ ಸಂಗಮ’ ಎಂಬ ಕಾರ್ಯಕ್ರಮ ನಡೆದಾಗ ಕಾರ್ಯಕ್ರಮದ ದಿಕ್ಸೂಚಿ ಭಾಷಣಗಾರ್ತಿಯಾಗಿ ಆಗಮಿಸಿದ್ದ ಚೈತ್ರಾ ಕುಂದಾಪುರ, ಸಣ್ಣ ವಿಷಯವನ್ನು ದೊಡ್ಡದು ಮಾಡಿ ಪ್ರಚೋದನಕಾರಿ ಭಾಷಣ ಮಾಡಿದ್ದರಂತೆ. ಇದರಿಂದ ಎರಡು ಬಣಗಳ ನಡುವೆ ಗಲಾಟೆಯಾಗುವಂತೆ ತಂದಿಟ್ಟಿದ್ದರಂತೆ.
ಇದರಿಂದ ನೊಂದ ಗ್ರಾಮಸ್ಥರು ಚೈತ್ರಾ ಕುಂದಾಪುರ ವಿರುದ್ಧ ಆಕ್ರೋಶಗೊಂಡಿದ್ದರಲ್ಲದೇ ಒಂದು ವರ್ಷದೊಳಗೆ ಆಕೆಗೆ ಶಿಕ್ಷೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿದ್ದರಂತೆ. ಇದೀಗ ಚೈತ್ರಾ ಕುಂದಾಪುರ, ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧನಕ್ಕೀಡಾಗುತ್ತಿದ್ದಂತೆ ಗ್ರಾಮಸ್ಥರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದು, ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹರಕೆ ತೀರಿಸಿದ್ದಾರೆ.