ಬೆಂಗಳೂರು: ದ್ವಿತೀಯ ಪಿಯುಸಿಯ ಮೂರು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುತ್ತಾರೋ ಆ ಅಂಕಪಟ್ಟಿಯನ್ನೇ ಸಿಇಟಿಗೆ ಪರಿಗಣಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಸಮ್ಮತಿಸಿದೆ.
ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ನಡೆಸಲಾಗುವುದು. ಇದುವರೆಗೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಪೂರಕ ಪರೀಕ್ಷೆ ತೆಗೆದುಕೊಂಡು ಮತ್ತೆ ಉಳಿದ ವಿಷಯಗಳಲ್ಲಿ ತೇರ್ಗಡೆಯಾಗಬೇಕಿತ್ತು. ಮುಖ್ಯ ಪರೀಕ್ಷೆ ಹಾಗೂ ಪೂರಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಂಕಗಳನ್ನು ಕ್ರೋಡೀಕರಿಸಿ ಅಂಕಪಟ್ಟಿ ನೀಡಲಾಗುತ್ತಿತ್ತು.
ಇದೇ ಮೊದಲ ಬಾರಿಗೆ 3 ವಾರ್ಷಿಕ ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಫಲಿತಾಂಶ ಉತ್ತಮಪಡಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಮೂರು ಪರೀಕ್ಷೆ ಬರೆಯಬಹುದಾಗಿದೆ. ಯಾವ ಪರೀಕ್ಷೆಯಲ್ಲಿ ಯಾವ ವಿಷಯದಲ್ಲಿ ಹೆಚ್ಚು ಅಂಕಗಳು ಬಂದಿರುತ್ತವೆಯೋ ಅವುಗಳನ್ನೇ ಉಳಿಸಿಕೊಂಡು ಉತ್ತಮ ಅಂಕಪಟ್ಟಿ ಪಡೆದುಕೊಳ್ಳಬಹುದು. ಅದೇ ಅಂಕಗಳನ್ನು ಸಿಇಟಿ ಮಾರ್ಕ್ಸ್ ಗಳ ಜೊತೆಗೆ ರ್ಯಾಂಕಿಂಗ್ ಪಟ್ಟಿ ಸಿದ್ಧಪಡಿಸಲು ಪರಿಗಣಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ ತಿಳಿಸಿದ್ದಾರೆ.