
ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಕೆಲಸ ಅವಧಿ ಬದಲಾಗಲಿದ್ದು, ವಾರಕ್ಕೆ ಐದು ದಿನ ಕೆಲಸ, ಎರಡು ದಿನ ರಜೆ ಪದ್ದತಿ ಜಾರಿಗೆ ತರಲಾಗುವುದು.
5 ದಿನ ಕೆಲಸ, 2 ದಿನ ರಜೆ ನೀಡುವಂತೆ ಬೇಡಿಕೆ ಇದ್ದು, ನೌಕರರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಶೀಘ್ರವೇ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಹೊಸ ಪದ್ದತಿ ಜಾರಿಗೆ ಹಣಕಾಸು ಸಚಿವಾಲಯದಿಂದ ಸದ್ಯವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಲಾಗಿದೆ.
ಇನ್ನು ಮುಂದೆ ಬ್ಯಾಂಕ್ ನೌಕರರಿಗೆ ವಾರದಲ್ಲಿ 5 ದಿನ ಕೆಲಸ ಶನಿವಾರ ಮತ್ತು ಭಾನುವಾರ ರಜೆ ಸಿಗಲಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕ್ ಉದ್ಯೋಗಿಗಳಿಗೆ ರಜೆ ಇದ್ದು, ಈಗ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಹಾಗೂ ಐದನೇ ಶನಿವಾರ ಕೂಡ ರಜೆ ಸಿಗಲಿದೆ. ಕೆಲಸದ ಅವಧಿ 40 ನಿಮಿಷ ಹೆಚ್ಚಳವಾಗಲಿದ್ದು, ಬೆಳಗ್ಗೆ 9:45 ರಿಂದ ಸಂಜೆ 5:30ರ ವರೆಗೆ ಬ್ಯಾಂಕ್ ನೌಕರರು ಕೆಲಸ ಮಾಡಬೇಕಿದೆ.
ಎರಡು ದಿನ ರಜೆ ಸಿಗುವುದರಿಂದ ನೌಕರರ ಒತ್ತಡ ಕಳೆದು ಉತ್ಸಾಹದಿಂದ ಕೆಲಸದಲ್ಲಿ ತೊಡಗುವುದರಿಂದ ಕಾರ್ಯದಕ್ಷತೆ ಹೆಚ್ಚಾಗುತ್ತದೆ ಎನ್ನುವ ಉದ್ದೇಶ ಇದರ ಹಿಂದಿದೆ. ಐದು ದಿನದ ಕೆಲಸ, ಎರಡು ದಿನ ರಜೆ ನೀಡುವ ಪದ್ಧತಿ ಜಾರಿಗೊಳಿಸಬೇಕೆಂದು ಭಾರತೀಯ ಬ್ಯಾಂಕುಗಳ ಸಂಘ, ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಸಮ್ಮತಿಸಿದ್ದು, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಇದಕ್ಕೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದೆ.