ನವದೆಹಲಿ: ಅಂಗಾಂಗ ದಾನ ಮಾಡುವ ಕೇಂದ್ರ ಸರ್ಕಾರದ ನೌಕರರಿಗೆ ಗರಿಷ್ಠ 42 ದಿನ ವಿಶೇಷ ಸಾಂದರ್ಭಿಕ ರಜೆ ಪಡೆದುಕೊಳ್ಳಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ದಾನಿಗಳ ಅಂಗಾಂಗ ಪಡೆಯಲು ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ಕೈಗೊಂಡಿದ್ದರೂ ಸರ್ಕಾರಿ ನೋಂದಾಯಿತ ವೈದ್ಯರ ಸಲಹೆಯಂತೆ ಈ ವಿಶೇಷ ಸಾಂದರ್ಭಿಕ ರಜೆಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2023ರಲ್ಲಿ ಈ ಕುರಿತಾಗಿ ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ದಿನದಿಂದಲೇ ವಿಶೇಷ ಸಾಂದರ್ಭಿಕ ರಜೆ ಪಡೆದುಕೊಳ್ಳಬಹುದು. ಅಗತ್ಯವಿದ್ದಲ್ಲಿ ವೈದ್ಯರ ಶಿಫಾರಸ್ಸಿನಂತೆ ಶಸ್ತ್ರಚಿಕಿತ್ಸೆಗಿಂತ ಒಂದು ವಾರ ಮೊದಲೇ ರಜೆ ತೆಗೆದುಕೊಳ್ಳುವ ಅವಕಾಶವಿದೆ ಎಂದು ಅವರು ಲಿಖಿತ ಉತ್ತರ ನೀಡಿದ್ದಾರೆ.
ಇದು ಭಾರತದಲ್ಲಿ ಅಂಗಾಂಗ ದಾನಕ್ಕೆ ಬೆಂಬಲವನ್ನು ಬೆಳೆಸುವ ನಿಟ್ಟಿನಲ್ಲಿ ನಿಜಕ್ಕೂ ಒಂದು ಉತ್ತಮ ಹೆಜ್ಜೆಯಾಗಿದೆ. ಇದು ಸರ್ಕಾರಿ ನೌಕರರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಬೆಂಬಲಿಸಲು ಮತ್ತು ಇತರ ಸಂಸ್ಥೆಗಳು ಅನುಸರಿಸಲು ಮಾನದಂಡವನ್ನು ಸ್ಥಾಪಿಸಲು ಸಹ ಸಹಾಯ ಮಾಡುತ್ತದೆ ಎಂದಿದ್ದಾರೆ.