
ಬೆಂಗಳೂರು: ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ನಿಗದಿತ ದಿನದಂದು ಪರೀಕ್ಷೆಗಳ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ.
ಪರೀಕ್ಷಾ ಅಕ್ರಮ ತಡೆಗೆ ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಾರಿಗೊಳಿಸಿದ್ದ ವೆಬ್ ಕಾಸ್ಟಿಂಗ್ ಕಣ್ಗಾವಲನ್ನು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೆ ವಿಸ್ತರಿಸಲಾಗಿದೆ. ಈ ವ್ಯವಸ್ಥೆ ಜಾರಿಯಿಂದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
1171 ಕೇಂದ್ರಗಳ ಪ್ರತಿ ಕೊಠಡಿಯಲ್ಲಿಯೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯಾವುದೇ ಕೊಠಡಿಯಲ್ಲಿ ವಿದ್ಯಾರ್ಥಿ ಮಾತನಾಡುವುದು, ನಕಲು ಮಾಡುವುದು, ಕಾಪಿ ಚೀಟಿ ಇಟ್ಟುಕೊಂಡು ಪರೀಕ್ಷೆ ಬರೆಯುವುದು ಇತರೆ ಯಾವುದೇ ಅಕ್ರಮ ನಡೆದರೆ ಅದನ್ನು ವೆಬ್ ಕಾಸ್ಟಿಂಗ್ ಮೂಲಕ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಗಳಲ್ಲಿ ಗಮನಿಸಬಹುದು. ಅಕ್ರಮ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
7.13 ಲಕ್ಷ ವಿದ್ಯಾರ್ಥಿಗಳ ನೋಂದಣಿ
7.13 862 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-1 ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 6,61,474 ತರಗತಿ ವಿದ್ಯಾರ್ಥಿಗಳಿದ್ದಾರೆ. 34,071 ಪುನರಾವರ್ತಿತ, 18,317 ಖಾಸಗಿ ಅಭ್ಯರ್ಥಿಗಳಾಗಿದ್ದಾರೆ. ಐವರು ತೃತೀಯ ಲಿಂಗಿಗಳಿದ್ದಾರೆ
ಪರೀಕ್ಷಾ ವೇಳಾಪಟ್ಟಿ
ಮಾರ್ಚ್ 1, 2025 ರಂದು ಕನ್ನಡ ಮತ್ತು ಅರೆಬಿಕ್ ವಿಷಯ, ಮಾರ್ಚ್ 3 ರಂದು ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಹಾಗೂ ಮಾರ್ಚ್ 4 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಮತ್ತು ಫ್ರೆಂಚ್ ವಿಷಯದ ಪರೀಕ್ಷೆಗಳು ನಡೆಯಲಿವೆ.
ಮಾರ್ಚ್ 5 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 7 ರಂದು ಇತಿಹಾಸ, ಭೌತಶಾಸ್ತ್ರ, ಮಾರ್ಚ್ 10 ರಂದು ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ ಮತ್ತು ಗೃಹ ವಿಜ್ಞಾನ, ಮಾರ್ಚ್ 12 ರಂದು ಮನಃಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಮೂಲ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ.
ಮಾರ್ಚ್ 13 ರಂದು ಅರ್ಥಶಾಸ್ತ್ರ, ಮಾರ್ಚ್ 15 ರಂದು ಇಂಗ್ಲಿಷ್, ಮಾರ್ಚ್ 17 ರಂದು ಭೂಗೋಳಶಾಸ್ತ್ರ, ಮಾರ್ಚ್ 18 ರಂದು ಜೀವಶಾಸ್ತ್ರ ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಮಾರ್ಚ್ 19 ರಂದು ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ ರೀಟೈಲ್, ಆಟೋಮೊಬೈಲ್ ಹೆಲ್ತ್ ಕೇರ್, ಬ್ಯೂಟಿ ಆ್ಯಂಡ್ ವೆಲ್‍ನೆಸ್ ಹಾಗೂ ಮಾರ್ಚ್ 20 ರಂದು ಹಿಂದಿ ಪರೀಕ್ಷೆ ನಡೆಯಲಿವೆ.