ನವದೆಹಲಿ: ಮಣಿಪುರ ವೈರಲ್ ವಿಡಿಯೋ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲಿದೆ. ರಾಜ್ಯದ ಹೊರಗೆ ವಿಚಾರಣೆ ನಡೆಯಲಿದೆ.
ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಕಿರುಕುಳ ನೀಡಿ ಸಾಮೂಹಿಕ ಅತ್ಯಾಚಾರವೆಸಗಿದ ಮಣಿಪುರದ ವೈರಲ್ ವಿಡಿಯೋ ಪ್ರಕರಣವನ್ನು ಗೃಹ ಸಚಿವಾಲಯವು(ಎಂಎಚ್‌ಎ) ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ಹಸ್ತಾಂತರಿಸಲಿದೆ.
ಮೇ 4 ರಂದು ರಾಜ್ಯದಲ್ಲಿ ಎರಡು ಜನಾಂಗೀಯ ಬುಡಕಟ್ಟುಗಳಾದ ಮೈತೆ ಮತ್ತು ಕುಕಿ ನಡುವೆ ಹಿಂಸಾಚಾರ ಭುಗಿಲೆದ್ದ ನಂತರ ಈ ವಿಡಿಯೋ ವೈರಲ್ ಆಗಿತ್ತು.
ರಾಜ್ಯದ ಹೊರಗೆ ವಿಚಾರಣೆ ನಡೆಯಲಿವೆ. ನೆರೆಯ ಅಸ್ಸಾಂನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗಿದೆ.
ಕೇಂದ್ರ ಗೃಹ ಸಚಿವಾಲಯವು ಮೈತಿ ಮತ್ತು ಕುಕಿ ಎರಡೂ ಗುಂಪುಗಳೊಂದಿಗೆ ಸಂಪರ್ಕದಲ್ಲಿದೆ. ಮಣಿಪುರದಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ಮಾತುಕತೆ ಮುಂದುವರಿದ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ ಸುಮಾರು ಮೂರು ತಿಂಗಳ ಕಾಲ ನಡೆದ ಜನಾಂಗೀಯ ಹಿಂಸಾಚಾರವು 160 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.
ಮೇ 4 ರಂದು ಇಬ್ಬರು ಮಹಿಳೆಯರನ್ನು ಒಳಗೊಂಡ ಘಟನೆಯ ವೀಡಿಯೊ ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಷ್ಟ್ರವ್ಯಾಪಿ ಆಕ್ರೋಶಕ್ಕೆ ಕಾರಣವಾಯಿತು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲೂ ಪ್ರತಿಪಕ್ಷಗಳು ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ಏತನ್ಮಧ್ಯೆ ಮತ್ತೊಂದು ಬೆಳವಣಿಗೆಯಲ್ಲಿ, ಮಣಿಪುರದ ವೈರಲ್ ವೀಡಿಯೊವನ್ನು ಚಿತ್ರೀಕರಿಸಿದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.