
ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ತಮ್ಮ ನಾಮಪತ್ರದಲ್ಲಿ ಸೂಚಕರ ನಕಲಿ ಸಹಿ ಮಾಡಿಸಿ, ಸುಳ್ಳು ಸೂಚಕರ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ಜಿಲ್ಲಾ ಚುನಾವಣಾ ಅಧಿಕಾರಿ ರಘುನಂದನ ಮೂರ್ತಿ ಅವರು ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಸಿದ್ದಪ್ಪ ಕಲ್ಲಪ್ಪ ಪೂಜಾರಿ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ ನಾಮಪತ್ರದೊಂದಿಗೆ ಸುಳ್ಳು ಸೂಚಕರ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಪರಿಶೀಲನೆ ವೇಳೆ ಸೂಚಕರ ವಿವರ ಮತ್ತು ಅವರ ಸಹಿಯ ಬಗ್ಗೆ ಸಂಶಯ ಬಂದಿದ್ದು, ಸೂಚಕರ ಮನೆಗೆ ಹೋಗಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಲಾಗಿದೆ. ಇದು ನಮ್ಮ ಸಹಿ ಅಲ್ಲ ನಾವು ನಾಮಪತ್ರದ ನಮೂನೆಗೆ ಸಹಿ ಹಾಕಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.