ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ತೀವ್ರ ಹಗ್ಗ ಜಗ್ಗಾಟದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಸರ್ಕಸ್ ದೆಹಲಿಗೆ ಶಿಫ್ಟ್ ಆಗಿದೆ.
ಉಭಯ ನಾಯಕರು ಸಚಿವರ ಪಟ್ಟಿ ಸಿದ್ಧಪಡಿಸಿಕೊಂಡು ತಂದಿದ್ದು, ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಒಮ್ಮತ ಮೂಡಿದಲ್ಲಿ ಭಾನುವಾರ ನೂತನ ಸಚಿವರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪ್ರತ್ಯೇಕ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದ್ದು, ಹೈಕಮಾಂಡ್ ನಾಯಕರೊಂದಿಗೆ ಸಮಾಲೋಚನೆಯ ಬಳಿಕ ಒಮ್ಮತದ ಪಟ್ಟಿ ರೆಡಿಯಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ 8 ಜನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನೂ 20 ಮಂದಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
50ಕ್ಕೂ ಹೆಚ್ಚು ಆಕಾಂಕ್ಷಿಗಳು ಕೂಡ ದೆಹಲಿಗೆ ದೌಡಾಯಿಸಿದ್ದು, ಭಾರಿ ಲಾಬಿ ನಡೆಸಿದ್ದಾರೆ. ಸದ್ಯಕ್ಕೆ 20 ಸಚಿವ ಸ್ಥಾನಗಳನ್ನು ಭರ್ತಿ ಮಾಡಲಿದ್ದು, 4 ಸ್ಥಾನ ಖಾಲಿ ಉಳಿಸಿಕೊಳ್ಳಲು ಚಿಂತನೆ ನಡೆದಿದೆ. ಜಾತಿ, ಪ್ರದೇಶವಾರು ಹಂಚಿಕೆಗೆ ಕಸರತ್ತು ನಡೆದಿದ್ದು, ಶನಿವಾರ ಇಲ್ಲವೇ ಭಾನುವಾರ ಸಂಪುಟ ವಿಸ್ತರಣೆ ಮಾಡಿ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.