ಚಿಕ್ಕಮಗಳೂರು: ಬಿಜೆಪಿ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪದಗ್ರಹಣ ಸಮಾರಂಭಕ್ಕೆ ಹಾಜರಾಗುತ್ತಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 15ರ ಸಂಜೆಯವರೆಗೂ ಮಧ್ಯಪ್ರದೇಶ ಚುನಾವಣಾ ಪ್ರಚಾರ ಇರುವ ಕಾರಣ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ನಾನು ಯಾವತ್ತೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. ಒಂದು ವೇಳೆ ಬೇಡ ಎನಿಸಿದರೆ ರಾಜಕೀಯ ಬಿಟ್ಟು ಮನೆಯಲ್ಲಿ ಇರುತ್ತೇನೆ. ಆದರೆ ಬೇರೆ ಪಕ್ಷಕ್ಕೆ ಹೋಗಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನವೆಂಬರ್ 15 ರಂದು ಜವಾಬ್ದಾರಿ ಸ್ವೀಕರಿಸಲಿದ್ದಾರೆ. ಎರಡು ಬಾರಿ ಕರೆ ಮಾಡಿ ನನಗೆ ಆಹ್ವಾನಿಸಿದ್ದಾರೆ. ನವೆಂಬರ್ 15ರ ರಾತ್ರಿವರೆಗೂ ಮಧ್ಯಪ್ರದೇಶ ಚುನಾವಣಾ ಪ್ರಚಾರ ಜವಾಬ್ದಾರಿ ಇರುವುದರಿಂದ ಸಮಾರಂಭಕ್ಕೆ ಬರಲು ಆಗುವುದಿಲ್ಲವೆಂದು ಅವರಿಗೆ ತಿಳಿಸಿದ್ದೇನೆ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.
ನಾನು 20 ವರ್ಷ ಶಾಸಕನಾಗಿದ್ದೆ. 35 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ವಿವಿಧ ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೇನೆ. ಜಗಳವಾಡಿದರೂ ನಮ್ಮ ಮನೆಯೊಳಗೆ ಜಗಳ. ಹೊಸ್ತಿಲು ದಾಟಿ ಬೇರೆಯವರ ಮನೆಗೆ ಹೋಗಿ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಕೇಳಿಲ್ಲ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಗೌರವ ಕೊಟ್ಟೆ ಕೊಡುತ್ತೇವೆ. ಪಕ್ಷದ ಗೆರೆಯನ್ನು ನಾನು ಯಾವಾಗಲೂ ದಾಟಿಲ್ಲ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬುದಷ್ಟೇ ನಮ್ಮ ಗುರಿಯಾಗಿದೆ. ಮಧ್ಯಪ್ರದೇಶ ಚುನಾವಣಾ ಪ್ರಚಾರಕ್ಕೆ ಹೋಗುತ್ತಿರುವ ಕಾರಣ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ ಎಂದು ವಿಜಯೇಂದ್ರ ಅವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.