ಬೆಂಗಳೂರು : ರಾಜ್ಯದಲ್ಲಿ ಸ್ಥಗಿತಗೊಂಡಿದ್ದ 5, 8, 9, 11 ನೇ ತರಗತಿ ಬೋರ್ಡ್ ಪರೀಕ್ಷೆ ಮುಂದುವರೆಸಲು ಹೈಕೋರ್ಟ್ ಆದೇಶ ಹೊರಡಿಸಿದೆ.
ರಾಜ್ಯದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ.
ಮುಂದಿನ ಪರೀಕ್ಷೆಯ ವೇಳೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ಈ ಮೂಲಕ ಸ್ಥಗಿತಗೊಂಡಿದ್ದ ಪರೀಕ್ಷೆ ಮುಂದುವರೆಸಲು ಹೈಕೋರ್ಟ್ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಎರಡು ಸುತ್ತೋಲೆಗಳು ಪ್ರಕಟವಾಗಿತ್ತು. ನಂತರ 5, 8, 9, 11ನೇ ತರಗತಿಗೆ ಬೋರ್ಡ್ ಎಕ್ಸಾಂ ನಡೆಸಲು ಸರ್ಕಾರ ನಿರ್ಧಾರವನ್ನು ಅಧಿಕೃತವಾಗಿ ಸೂಚಿಸಲಾಯಿತು.
ಸರ್ಕಾರದ ಸುತ್ತೋಲೆಗಳನ್ನು ವಿರೋಧಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ’ (ರುಪ್ಪಾ) ಹಾಗೂ “ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ’ (ಅವರ್ ಸ್ಕೂಲ್) ಕೋರ್ಟ್ನಲ್ಲಿ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಕೆ ಮಾಡಿದವು. ಬೋರ್ಡ್ ಪರೀಕ್ಷೆಗೆ ಸಂಬಂಧಿಸಿ ಸರ್ಕಾರ ಪ್ರಕಟಿಸಿದ ಎರಡೂ ಸುತ್ತೋಲೆಗಳನ್ನು ಹೈಕೋರ್ಟ್ನ ಏಕಸದಸ್ಯ ಪೀಠ ರದ್ದುಗೊಳಿಸಿತು. ಇದರಿಂದಾಗಿ, ಮಾ.11ರಿಂದ ನಡೆಯಬೇಕಿದ್ದ ಬೋರ್ಡ್ ಪರೀಕ್ಷೆ ರದ್ದುಗೊಂಡಿತು.