ಬೆಳಗಾವಿ: ಶೀಘ್ರವೇ ಬಿಪಿಎಲ್ ಕಾರ್ಡ್ ಗೆ ಸಂಬಂಧಿಸಿದಂತೆ ಗ್ರಾಮ, ವಾರ್ಡ್ ಮಟ್ಟದಲ್ಲಿ ಪರಿಶೀಲನೆ ನಡೆಸಿ ಯಾರಿಗೂ ತೊಂದರೆಯಾಗದಂತೆ ಅನರ್ಹರನ್ನು ಪಟ್ಟಿಯಿಂದ ಹೊರಹಾಕಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಭರತ್ ಶೆಟ್ಟಿ ಅವರು ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ಯಾವುದೇ ಅನಗತ್ಯ ಗೊಂದಲ ಬೇಡ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಾನದಂಡಗಳ ಅಡಿಯಲ್ಲಿ ಪಡಿತರ ಚೀಟಿಗಳ ಪರಿಷ್ಕರಣೆ ಮಾಡಿದಾಗ ಕೆಲವು ಗೊಂದಲ ಉಂಟಾಗಿತ್ತು. ನಂತರ ಮೂರು ಲಕ್ಷ ಬಿಪಿಎಲ್ ಕಾರ್ಡುಗಳನ್ನು ರೀ ಸ್ಟೋರ್ ಮಾಡಲಾಗಿದ್ದು, ಯಾವುದೇ ಅರ್ಹರಿಗೆ ಗೊಂದಲವಾಗದಂತೆ ಕಾರ್ಡ್ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿವೇಶನ ಮುಗಿದ ನಂತರ ಪಿಡಿಒ, ಆರ್ಐ, ಆಹಾರ ಇಲಾಖೆ ಅಧಿಕಾರಿಗಳ ತಂಡ ವಾರ್ಡ್, ಗ್ರಾಮ ಮಟ್ಟದಲ್ಲಿ ಮನೆಮನೆಗೆ ತೆರಳಿ ಬಿಪಿಎಲ್ ಗೆ ಸೇರಿದವರನ್ನು ಗುರುತಿಸಲಿದ್ದಾರೆ ಎಂದು ಹೇಳಿದ್ದಾರೆ.
ಮೂರು ತಿಂಗಳು ಪಡಿತರ ಪಡೆಯದಿದ್ದರೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ಬೇರೆ ಬೇರೆ ಕಾರಣಕ್ಕೆ ಪಡಿತರ ಪಡೆಯದೆ ಇರಬಹುದು. ಇದರಿಂದ ಅನಾರೋಗ್ಯ ಪೀಡಿತರು ಚಿಕಿತ್ಸೆ ಪಡೆಯಲು ತೊಂದರೆಯಾಗಿದೆ ಎಂದು ಶಾಸಕ ಭರತ್ ಶೆಟ್ಟಿ ಸರ್ಕಾರದ ಗಮನ ಸೆಳೆದರು.
ಈ ಸಮಸ್ಯೆ ಪರಿಹಾರಕ್ಕೆ ಜಂಟಿ ನಿರ್ದೇಶಕರು, ಜಿಲ್ಲಾ ಮಟ್ಟದ ಅಧಿಕಾರಿಗಳ ಹಂತದಲ್ಲಿ ಸರಿಪಡಿಸಲು ಕ್ರಮ ಕೈಗೊಂಡಿರುವುದಾಗಿ ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ.