
ರಾಜ್ಯದಲ್ಲಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರ ಪತ್ತೆಗೆ ಆಹಾರ ಇಲಾಖೆ ಅಧಿಕಾರಿಗಳು ಸಮರ ಸಾರಿದ್ದು, 10,97,621 ಅಕ್ರಮ ಬಿಪಿಎಲ್ ಕಾರ್ಡ್ ಗಳು ಪತ್ತೆಯಾಗಿವೆ.
ಇವುಗಳಲ್ಲಿ 98,431 ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. 4036 ಸರ್ಕಾರಿ ನೌಕರರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಗೊತ್ತಾಗಿದೆ.
ರಾಜ್ಯ ಸರ್ಕಾರ ಅಕ್ರಮ ಬಿಪಿಎಲ್ ಕಾರ್ಡ್ ಗಳ ಪತ್ತೆಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಕಾರ್ಯ ಕೈಗೊಂಡಿದ್ದಾರೆ. ನಿಯಮಗಳ ಪ್ರಕಾರ ಸರ್ಕಾರಿ, ಅರೆ ಸರ್ಕಾರಿ ನೌಕರರು ತೆರಿಗೆ ಪಾವತಿದಾರರು, 4 ಚಕ್ರದ ಬಿಳಿ ಬೋರ್ಡ್ ವಾಹನ ಹೊಂದಿದವರು, ಆದಾಯ ತೆರಿಗೆ ಪಾವತಿಸುವ ಕುಟುಂಬದವರು, ಒಂದೇ ಮನೆಯಲ್ಲಿ ವಾಸವಾಗಿದ್ದು ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದವರು, 7.5 ಎಕರೆಗಿಂತ ಹೆಚ್ಚಿನ ಡಿ ವರ್ಗದ ಅಥವಾ ತತ್ಸಮಾನ ಭೂಮಿ ಹೊಂದಿದವರು, ವಾರ್ಷಿಕ 1.20 ಲಕ್ಷ ರೂ. ಗಿಂತ ಹೆಚ್ಚು ಆದಾಯ ಹೊಂದಿದವರು, ನಗರ ಪ್ರದೇಶದಲ್ಲಿ ಒಂದು ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕ ಮನೆ ಹೊಂದಿದವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅವಕಾಶ ಇರುವುದಿಲ್ಲ.
ಆದರೆ, ನಿಯಮಗಳನ್ನು ಉಲ್ಲಂಘಿಸಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲಾಗಿದೆ. ಆದಾಯ ತೆರಿಗೆ ಪಾವತಿದಾರರು ಸರ್ಕಾರಿ ಉದ್ಯೋಗಿಗಳು ಸೇರಿದಂತೆ ನಿಯಮ ಮೀರಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಅವರು ರೇಷನ್ ಕಾರ್ಡ್ ಪಡೆದುಕೊಂಡ ದಿನದಿಂದ ನಿರಂತರ ಪಡಿತರ ಪಡೆದಿದ್ದಾರೆ ಎಂದು ಲೆಕ್ಕಾಚಾರ ಮಾಡಿ ಕೆಜಿಗೆ 34 ರೂಪಾಯಿ ದರದಲ್ಲಿ ದಂಡ ವಸೂಲಿ ಮಾಡಲಾಗುವುದು ಎನ್ನಲಾಗಿದೆ.