ಬೆಂಗಳೂರು: ನಿಗಮ -ಮಂಡಳಿ ನೇಮಕಾತಿಗೆ ನವೆಂಬರ್ 21ರ ಬಳಿಕ ಚಾಲನೆ ಸಿಗಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪಂಚ ರಾಜ್ಯಗಳ ಚುನಾವಣೆಯಲ್ಲಿ ಸಕ್ರಿಯರಾಗಿರುವುದರಿಂದ ನಿಗಮ- ಮಂಡಳಿ ನೇಮಕಾತಿ ವಿಳಂಬವಾಗಿದೆ.
ನವೆಂಬರ್ 21ರ ಬಳಿಕ ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಶಾಸಕರ ಜೊತೆಗೆ ಮುಖಂಡರಿಗೂ ಮೊದಲ ಹಂತದಲ್ಲಿಯೇ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ಈ ಹಿಂದೆ ಮೊದಲ ಹಂತದಲ್ಲಿ ಶಾಸಕರಿಗೆ ಮಾತ್ರ ನಿಗಮ -ಮಂಡಳಿ ಹುದ್ದೆ ನೀಡಲು ಯೋಚಿಸಲಾಗಿತ್ತು. ಆದರೆ, ತೀವ್ರ ಒತ್ತಡ ಹಿನ್ನೆಲೆಯಲ್ಲಿ ಪಟ್ಟು ಸಡಿಲಿಸಲಾಗಿದ್ದು, 25 ಶಾಸಕರ ಜೊತೆಗೆ 15 ಕಾರ್ಯಕರ್ತರಿಗೂ ಮೊದಲ ಹಂತದಲ್ಲಿ ನಿಗಮ -ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ. ರಾಜ್ಯಕ್ಕೆ ಸುರ್ಜೇವಾಲಾ ಆಗಮಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದ ನಾಯಕರು ನಿಗಮ -ಮಂಡಳಿ ನೇಮಕವಾಗುವ ಶಾಸಕರು ಹಾಗೂ ಮುಖಂಡರ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಮೊದಲ ಹಂತದ ನಿಗಮ –ಮಂಡಳಿ ನೇಮಕಾತಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.