ಯಾವುದೇ ಶುಭ ಸಮಾರಂಭದಲ್ಲಿ ಅಕ್ಷತೆಯ ಬಳಕೆ ಕಡ್ಡಾಯ. ಅಕ್ಷತೆ ಅಕ್ಕಿಯಿಂದ ತಯಾರಾಗುವಂಥದ್ದು. ಕ್ಷತಿ ಉಂಟಾಗದ ಕಾಳುಗಳಿಂದ ಅಕ್ಷತೆ ಸಿದ್ಧವಾಗಬೇಕು. ಕ್ಷತಿ ಎಂದರೆ ಲೋಪ, ಮುಕ್ಕು, ತೊಂದರೆ. ಅಕ್ಷತೆಯಲ್ಲಿ ಬಳಸುವ ಅಕ್ಕಿ ಯಾವುದೇ ಕಾರಣಕ್ಕೂ ತುಂಡಾಗಿರಬಾರದು. ಆಕ್ಷತೆಯಲ್ಲಿ ಇಡೀ ಅಕ್ಕಿ ಕಾಳುಗಳನ್ನೇ ಬಳಸಬೇಕು.
ಅಕ್ಷತೆ ಆಶೀರ್ವಾದ ಮಾಡುವಾಗ ಬಳಸುವ ವಸ್ತು. ಹಿರಿಯ, ದೇವರ ಹಾರೈಕೆ, ಆಶೀರ್ವಾದ, ಶುಭ ಕಾಮನೆಗಳು ಅಕ್ಷತೆಯ ಮೂಲಕ ನಮ್ಮನ್ನು ತಲುಪುತ್ತದೆ. ಅಕ್ಷತೆ ಸಕಾರಾತ್ಮಕ ಶಕ್ತಿಯ ವಾಹಕ. ಸಮೃದ್ಧಿ, ಸಂತೋಷ, ಸಾತ್ವಿಕತೆಯ ಪ್ರತೀಕ ಅಕ್ಷತೆ.
ಶುಭ ಸಂದರ್ಭದಲ್ಲಿ ಮಾತ್ರ ಅಕ್ಷತೆ ಉಪಯೋಗಿಸುವುದು ನೀವು ಗಮನಿಸಿರಬಹುದು. ಅರಿಶಿನ ಹಾಗೂ ಕುಂಕುಮ ಲೇಪಿತ ಅಕ್ಷತೆಯ ಬಳಕೆಯಲ್ಲಿ ಒಂದು ಅಂಶವನ್ನು ಗಮನಿಸಲೇ ಬೇಕು. ಸ್ತ್ರೀ ದೇವತೆಗಳಿಗೆ ಅಂದ್ರೆ ಪಾರ್ವತಿ, ಲಕ್ಷ್ಮಿ, ಪೂಜೆಯ ಸಂದರ್ಭದಲ್ಲಿ ಕುಂಕುಮ ಲೇಪಿತ ಅಕ್ಷತೆ ಬಳಸಬೇಕು. ಏಕೆಂದರೆ ಹೆಣ್ಣು ದೇವರಿಗೆ ಕೆಂಪು ಬಣ್ಣ ಬಹಳ ಪ್ರಿಯ. ಗಣೇಶ, ವಿಷ್ಣು, ಸುಬ್ರಮಣ್ಯ, ಶಿವ ಇಂತಹ ದೇವರುಗಳಿಗೆ ಅರಿಶಿನ ಮಿಶ್ರಿತ ಅಕ್ಷತೆಯ ಬಳಕೆ ಒಳ್ಳೆಯದು.