ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ವಿಪಕ್ಷಗಳ ಪಾದಯಾತ್ರೆಗೆ ಕೌಂಟರ್ ನೀಡಲು ಕಾಂಗ್ರೆಸ್ ಮದ್ದೂರಿನಲ್ಲಿ ಜನಂದೋಲನ ಸಮಾವೇಶ ನಡೆಸಿದೆ. ಇದೇ ವೇಳೆ ಬಿಜೆಪಿ ವಧಿಯಲ್ಲಿನ ಸಾಲು ಸಾಲು ಹಗರಣಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ.
ಬಿಜೆಪಿ ಅವಧಿಯಲ್ಲಿನ ಕೆಕೆಆರ್ ಡಿಬಿ ಹಗರಣ, ಬಗರ್ ಹುಕುಂ ಅಕ್ರಮ, ಕೃಷಿ ಇಲಾಖೆ ಹಗರಣ, ಮೊಟ್ಟೆ ಹಗರಣಗಳನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಸಾಲು ಸಾಲು ಆರೋಪಗಳ ಮೂಲಕ ವಾಗ್ದಾಳಿ ನಡೆಸಿದೆ.
KKRDBಯಲ್ಲಿ 200 ಕೋಟಿಗೂ ಹೆಚ್ಚು ಲೂಟಿ ಹೊಡೆದು ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಅನ್ಯಾಯ ಮಾಡಿದೆ. ವಿಪಕ್ಷ ನಾಯಕ ಆರ್.ಅಶೋಕ್ ಭ್ರಷ್ಟಾಚಾರದ ಸಾಮ್ರಾಟ ಎಂದು ಕಿಡಿ ಕಾರಿದೆ.
ಆಪ್ತ ಸಹಾಯಕನ ಮೂಲಕ ಲಂಚ ಪಡೆದಿದ್ದೂ ಅಲ್ಲದೇ ಭೂ ಕಬಳಿಕೆ, ಬಗರ್ ಹುಕುಂ ಅಕ್ರಮಗಳ ಭ್ರಷ್ಟಾಚರ ನಡೆಸಿರುವ ಆರ್.ಅಶೋಕ್ ಭ್ರಷ್ಟಾಚಾರದ ಸಾಮ್ರಾಟ!
ಕೃಷಿ ಇಲಾಖೆಯಲಿ ಹಗರಣ ನಡೆದಿದೆ. ಬಿ. ಸಿ ಪಾಟೀಲ್ ಸಚಿವರಾಗಿದ್ದಾಗ ಅಧಿಕಾರಿಗಳು, ನೌಕರರ ಮೂಲಕ ಲಂಚ ವಸೂಲಿ ಮಾಡಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿತ್ತು.
ಬಿಜೆಪಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಶಶಿಕಲಾ ಜೊಲ್ಲೆ, ಮೊಟ್ಟೆ ಹಗರಣ ನಡೆಸಿ ಶಾಲಾ ಮಕ್ಕಳ ಪಾಲಿನ ಮೊಟ್ಟೆಯನ್ನೂ ತಿಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.