ಬೆಂಗಳೂರು : ಡಿ.21 ರಿಂದ ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ‘ಯುವನಿಧಿ ಯೋಜನೆ’ ನೋಂದಣಿ ಆರಂಭವಾಗಲಿದೆ ಎಂದು ಹೇಳಲಾಗಿತ್ತು, ಆದರೆ ಇದೀಗ ಡಿ.21 ರಿಂದ ಯುವನಧಿ ನೋಂದಣಿ ಆರಂಭವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಡಿ. 21ರಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭ ಎಂದು ಹೇಳಿದ್ದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಖಾತೆ ಸಚಿವ ಶರಣ ಪ್ರಕಾಶ್ ಪಾಟೀಲ್ ಇದೀಗ ಡಿಸೆಂಬರ್ 21ಕ್ಕೆ ಯುವ ನಿಧಿ ನೋಂದಣಿಯಿಲ್ಲ ಎಂದು ಹೇಳಿದ್ದಾರೆ. ಜನವರಿಯಿಂದ ಯುವ ನಿಧಿ ಗ್ಯಾರಂಟಿ ಯೋಜನೆಯನ್ನು ಪ್ರಾರಂಭ ಮಾಡುತ್ತೇವೆ. ಆದರೆ, ಡಿಸೆಂಬರ್ 21ಕ್ಕೆ ಯುವ ನಿಧಿ ನೋಂದಣಿಯನ್ನು ಪ್ರಾರಂಭ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಘೋಷಿಸಲಾಗಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಿದ್ದು, ಇದೀಗ ಯುವನಿಧಿ ಯೋಜನೆಯನ್ನು ಜಾರಿಗೆ ಸಿದ್ಧತೆ ನಡೆಸಿದೆ.
ಏನಿದು ಯುವನಿಧಿ ಯೋಜನೆ
2023 ರಲ್ಲಿ ಪದವಿ ಮತ್ತು ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿ, ಆರು ತಿಂಗಳಾದ್ರೂ ಉದ್ಯೋಗ ಸಿಗದೆ ಪರದಾಡುತ್ತಿರುವ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿ ಆರು ತಿಂಗಳಾದ್ರೂ ಕೆಲಸ ಸಿಗದವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರಲಿದ್ದಾರೆ. ಜೊತೆಗೆ ಉನ್ನತ ಶಿಕ್ಷಣ ಪಡೆಯಲು ಸೇರ್ಪಡೆಯಾಗಿರಬಾರದಾಗಿದೆ. ಸದ್ಯ ಉದ್ಯೋಗ ದೊರಕದವರು ಎರಡು ವರ್ಷಗಳ ವರೆಗೆ ಯೋಜನೆಯ ಫಲಾನುಭವಿಗಳಾಗಿರಲಿದ್ದಾರೆ.
ಪದವಿ ವಿದ್ಯಾರ್ಥಿಗಳಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿದವರಿಗೆ ಮಾಸಿಕ 1,500 ರೂ. ಸಹಾಯಧನ ನೀಡಲಾಗುತ್ತದೆ. ಒಂದು ವೇಳೆ ಎರಡು ವರ್ಷದೊಳಗೆ ಉದ್ಯೋಗ ದೊರೆತರೆ ಅವನ್ನು ಯೋಜನೆಯ ಫಲಾನುಭವಿ ಪಟ್ಟಿಯಿಂದ ಹೊರಗಿಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಈ ದಾಖಲೆಗಳು ಕಡ್ಡಾಯ
ಆಧಾರ್ ಕಾರ್ಡ್
10ನೇ ತರಗತಿ ಅಂಕಪಟ್ಟಿ
ದ್ವಿತೀಯ ಪಿಯುಸಿ ಅಂಕಪಟ್ಟಿ
ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ
ಡಿಪ್ಲೊಮಾ ಪ್ರಮಾಣಪತ್ರ
ಜಾತಿ ಪ್ರಮಾಣ ಪತ್ರ (ಅನ್ವಯವಾದಲ್ಲಿ) ಆದಾಯ ಪ್ರಮಾಣಪತ್ರ
ಮೊಬೈಲ್ ನಂಬರ್
ಬ್ಯಾಂಕ್ ಖಾತೆ ವಿವರಗಳು
ಸೆಲ್ಫ್ ಡಿಕ್ಲೆರೇಷನ್ ಪ್ರತಿ ಬೇಕಾಗುತ್ತದೆ.